ಬಿಡಿಎ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದೇ ಪರಿಶೀಲಿಸಿ: ಸರ್ಕಾರಕ್ಕೆ ಹೈಕೋರ್ಟ್

ತನಿಖಾ ಸಂಸ್ಥೆಗಳಿಗೆ ತಮ್ಮ ಅನುಮತಿ ಇಲ್ಲದೆಯೇ ಯಾವುದೇ ದಾಖಲೆ, ಮಾಹಿತಿ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿ ಬಿಡಿಎ ಹೊರಡಿಸಿರುವ ಆದೇಶ ಪರಿಶೀಲಿಸಿ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನಿಖಾ ಸಂಸ್ಥೆಗಳಿಗೆ ತಮ್ಮ ಅನುಮತಿ ಇಲ್ಲದೆಯೇ ಯಾವುದೇ ದಾಖಲೆ, ಮಾಹಿತಿ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿ ಬಿಡಿಎ ಹೊರಡಿಸಿರುವ ಆದೇಶ ಪರಿಶೀಲಿಸಿ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 

ಬಿಡಿಎ ಆಯುಕ್ತರ ಆದೇಶ ಪ್ರಶ್ನಿಸಿ ಎಸ್.ಅರುಣಾಚಲಂ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. 

ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತನಿಖಾ ಸಂಸ್ಥೆಗಳಿಗೆ ಆಯುಕ್ತರ ಅನುಮತಿ ಇಲ್ಲದೆ ಮಾಹಿತಿ ಅಥವಾ ದಾಖಲೆ ನೀಡಬಾರದು ಎಂಬ ಆದೇಶ ಎಷ್ಟು ಸರಿ, ಇದರಿಂದ ತನಿಖಾ ಸಂಸ್ಥೆಗಳ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲವೇ ಎಂದು ಬಿಡಿ ಪರ ವಕೀಲರನ್ನು ಪ್ರಶ್ನಿಸಿತು. 

ಬಿಡಿಎ ಪರ ವಕೀಲರು ಉತ್ತರಿಸಿ, ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸಿಬ್ಬಂದಿ ತನಿಖೆಗೆ ಮಾಹಿತಿ ನೀಡುವ ಮುನ್ನ ಆಯುಕ್ತರಿಗೆ ತಿಳಿಸಿ ಹೋಗಬೇಕೆಂದು ಹೇಳಲಾಗಿದೆ. ಆದೇಶವನ್ನು ಇಂಗ್ಲೀಷ್ ಭಾಷಾಂತರ ಮಾಡುವಾಗ ಸ್ವಲ್ಪ ಏರುಪೇರಾಗಿದೆ ಎಂದು ತಿಳಿಸುವ ಮೂಲಕ ಆಯುಕ್ತರ ಆದೇಶವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. 

ಅದರಿಂದ ಬೇಸಗೊಂಡ ನ್ಯಾಯಪೀಠ, ತನಿಖಾ ಸಂಸ್ಥೆಗಳಿಗೆ ತಮ್ಮನ್ನು ಕೇಳಿಯೇ ಮಾಹಿತಿ ನೀಡಬೇಕೆಂದು ಆಯುಕ್ತರು ಹೊರಡಿಸಿರುವ ಆದೇಶ ಸೂಕ್ತ ಎನಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆಯುಕ್ತರ ಆದೇಶ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಈ ವಿಚಾರವಾಗಿ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆ ಆದೇಶ ಹೊರಡಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com