ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ
ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ

ವಿಜಯನಗರ ಪ್ರತ್ಯೇಕ ಜಿಲ್ಲೆ: ಸರ್ಕಾರದ ನಿರ್ಧಾರಕ್ಕೆ ಸಚಿವ ಆನಂದ್ ಸಿಂಗ್ ಸ್ವಾಗತ, ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಆಕ್ರೋಶ

ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಅಲ್ಲಿನ ಜನ ಹಾಗೂ ಜನಪ್ರತಿನಿಧಿಗಳ ಬಹುದಿನಗಳ ಕನಸು ನನಸಾಗುವ ಸಮಯ ಸಮೀಪಿಸಿದ್ದು, ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತ ಸಚಿವ ಸಂಪುಟದ ನಿರ್ಧಾರಕ್ಕೆ ಪರ ಹಾಗೂ ವಿರೋಧದ ಕೂಗುಗಳು ಕೇಳಿ ಬರುತ್ತಿದೆ. 
Published on

ಬೆಂಗಳೂರು: ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಅಲ್ಲಿನ ಜನ ಹಾಗೂ ಜನಪ್ರತಿನಿಧಿಗಳ ಬಹುದಿನಗಳ ಕನಸು ನನಸಾಗುವ ಸಮಯ ಸಮೀಪಿಸಿದ್ದು, ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತ ಸಚಿವ ಸಂಪುಟದ ನಿರ್ಧಾರಕ್ಕೆ ಪರ ಹಾಗೂ ವಿರೋಧದ ಕೂಗುಗಳು ಕೇಳಿ ಬರುತ್ತಿದೆ. 

ವಿಜಯನಗರ ಜಿಲ್ಲೆಯಾಗಬೇಕೆಂಬ ಬಹುದಿನದ ಬೇಡಿಕೆಗೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನೇತೃತ್ವದ  ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ದೊರೆತಿದೆ.  ಇದರಿಂದ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳನ್ನೊಳಗೊಂಡ ಈ ನೂತನ ಜಿಲ್ಲೆ ರಚನೆ ಮಾಡಬೇಕೆಂಬ ದೀರ್ಘಕಾಲದ ಬೇಡಿಕೆ ಈಡೇರಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಮತ್ತೊಂದೆಡೆ ಸರ್ಕಾರ ಈ ನಡೆಗೆ ಬಳ್ಳಾರಿ ಸಚಿವ ಸೋಮಶೇಖರ್ ರೆಡ್ಡಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ ರಚನೆಯ ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ನಿಲ್ಲುವೆ ಎಂದು ಎಚ್ಚರಿಸಿದ್ದಾರೆ.

ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗುತ್ತದೆ. ಈ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ. ವಿಜಯನಗರ ಜಿಲ್ಲೆ ಬೇಡ ಬೇಡ ಅಂತ ಎಷ್ಟು ಬಾರಿ ಸಿಎಂ ಬಿಎಸ್‍ವೈ ಅವರಿಗೆ ಹೇಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು. ಡಿವೈಡ್ ಆಗಲೇಬೇಕು ಎಂದು ಡಿಸೈಡ್ ಆದರೆ ನಾವೇನು ಮಾಡಬೇಕು. ರಾಜ್ಯ ಸರ್ಕಾರ ಮೊಂಡುತನಕ್ಕೆ ಬಿದ್ದರೆ ನಾವೇನು ಮಾಡಬೇಕು. ನಾನಂತೂ ಇನ್ನೊಂದು ಬಾರಿ ಮುಖ್ಯಮಂತ್ರಿಗಳಿಗೆ ಹೇಳುವುದಿಲ್ಲ. ಯಾರಾದರೂ ಈ ಬಗ್ಗೆ ಹೋರಾಟ ಮಾಡಿದರೆ ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಜನರೇ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಹೋರಾಟ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ನಾನೂ ಜನರ ಪರವಾಗಿ ಹೋರಾಟಕ್ಕೆ ಇಳಿಯುವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com