ಹುಬ್ಬಳ್ಳಿ: ನಟಿ ಉಮಾಶ್ರೀ ಕಾರು ಅಪಘಾತ; ಇಬ್ಬರು ಸಾವು
ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿವಾಹಿನಿಗಳು ವರದಿ ಮಾಡಿದ್ದು, ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗದತ್ತ ಹೊರಟಿದ್ದ ಇನ್ನೊಂದು ಕಾರಿನ ನಡುವೆ ಶುಕ್ರವಾರ ರಾತ್ರಿ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ಅಪಘಾತಕ್ಕೀಡಾಗ ಕಾರು ಚಿತ್ರನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರಿಗೆ ಸೇರಿದ್ದು ಎನ್ನಲಾಗಿದೆ.
ಉಮಾಶ್ರೀ ಅವರನ್ನು ಬಿಟ್ಟು ಕಾರು ಚಾಲಕ ತಮ್ಮೂರಿಗೆ ಹೊರಟಿದ್ದ. ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಸಮೀಪ ಅಪಘಾತ ನಡೆದಿದ್ದು, ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬಂದ ಕಾರುಗಳ ನಡುವೆ ಡಿಕ್ಕಿಯಾಗಿದೆ. ಧಾರವಾಡ ಮೂಲದ ಸ್ಮಿತಾ ಕಟ್ಟಿ ಹಾಗೂ ಇನ್ನೋರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರು ಮತ್ತು ಗಾಯಾಳುಗಳೆಲ್ಲರೂ ಬಲೆನೋ ಕಾರಿನಲ್ಲಿದ್ದವರು. ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಬಲೆನೋ ಕಾರು, ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಕುರಿತು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.