ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 
ಸಂತೋಷ್
ಸಂತೋಷ್
Updated on

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

ಸಂತೋಷ್ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 

ಸಂತೋಷ್ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ಡಾಲರ್ಸ್ ಕಾಲೋನಯಲ್ಲಿ ಅವರ ನಿವಾಸವಿದ್ದು, ರಾತ್ರಿ 8 ಗಂಟೆ ಹೊತ್ತಿಗೆ 12 ನಿದ್ರೆ ಮಾತ್ರೆ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದರು. ಇದನ್ನು ಗಮಿನಿಸದ ಅವರ ಪತ್ನಿ ಕೂಡಲೇ ಸಮೀಪದ ರಾಮಯ್ಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ. 

ವೈದ್ಯರು ಕೂಡಲೇ ಸಂತೋಷ್ ಅವರನ್ನು ತುರ್ತುನಿಗಾ ಘಟಕಕ್ಕೆ ದಾಖಲಿಸಿದ್ದು, ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಯತ್ನಕ್ಕೆ ಪ್ರಮುಖ ಕಾರಣಗಳಿನ್ನೂ ತಿಳಿದುಬಂದಿಲ್ಲ. 

ಈ ನಡುವೆ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಸುದ್ದಿ ತಿಳಿದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಂತೋಷ್ ಪತ್ನಿಗೆ ಧೈರ್ಯ ತುಂಬಿದ್ದಾರೆ. 

2 ದಿನಗಳ ಹಿಂದಷ್ಟೇ ಸಂತೋಷ್ ನನ್ನನ್ನು ಭೇಟಿ ಮಾಡಿದ್ದರು. ನನ್ನ ಜೊತೆಗೆ ಬೆಳಗ್ಗೆ ವಾಕಿಂಗ್ ಕೂಡ ಮಾಡಿದ್ದರು. ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಸಂತೋಷ್ ಪತ್ನಿ ಹಾಗೂ ವೈದ್ಯರ ಜೊತೆ ಮಾತನಾಡಿದ್ದೇನೆ. ಈ ಯತ್ನಕ್ಕೆ ಕಾರಣ ತಿಳಿದಿಲ್ಲ. ಘಟನೆಗೆ ಕಾರಣ ಪತ್ತೆ ಹಚ್ಚಬೇಕು. ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಯಡಿಯೂರಪ್ಪ ಅವರು ಹೇಳಿದ್ದಾರೆ. 

ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಮೊದಲನೇ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಸಂತೋಷ್ ಒಬ್ಬರೇ ಇದ್ದರು. ಘಟನೆ ನಡೆಯುವುದಕ್ಕೂ ಕೆಲ ನಿಮಿಷಗಳಿಗೂ ಮುನ್ನ ರೂಮಿಗೆ ಬಂದಿದ್ದ ಸಂತೋಷ್ ಅವರ ಪತ್ನಿ, ಸಂತೋಷ್ ಪುಸ್ತಕವೊಂದನ್ನು ಹಿಡಿದು ಓದುತ್ತಿರುವುದನ್ನು ನೋಡಿದ್ದಾರೆ. ಪ್ರಜ್ಞೆತಪ್ಪಿದ ಸ್ಥಿತಿಯನ್ನು ನೋಡಿ ಕೂಡಲೇ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಸಂತೋಷ್ ಅವರು 12 ನಿದ್ರೆ ಮಾತ್ರಗಳನ್ನು ತೆಗೆದುಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಕೆಲ ತಿಂಗಳುಗಳಿಂದ ಸಂತೋಷ್ ಮಾನಸಿಕ ಖಿನ್ನತೆಗೊಳಗಾಗಿರುವಂತಿದ್ದ. ಯಾರೊಂದಿಗು ಸರಿಯಾಗಿ ಮಾತನಾಡುತ್ತಿರಲಿಲ್ಲ. ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೇನೆಂದು ಯಾರೊಂದಿಗೂ ಹೇಳಿಕೊಂಡಿಲ್ಲ. ಸಂತೋಷ್ ಅವರು ಯಡಿಯೂರಪ್ಪ ಅವರ ಸಹೋದರಿಯ ಮೊಮ್ಮಗನಾಗಿದ್ದು, ಎಬಿವಿಪಿ ಹಾಗೂ ಆರ್'ಎಸ್ಎಸ್ ನಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಮುರಿದುಬೀಳುತ್ತಿದ್ದಂತೆಯೇ ಬಂಡಾಯ ಶಾಸಕರಿಗೆ ವಿಮಾನಗಳನ್ನು ಬುಕ್ ಮಾಡಿ ಮುಂಬೈ ಹಾಗೂ ದೆಹಲಿಯಲ್ಲಿ ಬಂಡಾಯ ಶಾಸಕರು ತಂಗಲು ಸಂತೋಷ್ ಅವರೇ ವ್ಯವಸ್ಥೆಗಳನ್ನು ಮಾಡಿದ್ದರು. 

ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸ್ಥಾಪನೆ ಮಾಡಲು ಹೊರಟಾಗಲೂ ಸಂತೋಷ್ ಅವರು ಯಡಿಯೂರಪ್ಪ ಅವರೊಂದಿಗಿದ್ದರು. 

ತಿಪಟೂರಿನ ಕಲ್ಪತರು ತಾಂತ್ರಿಕ ಸಂಸ್ಥೆಯಲ್ಲಿ ಸಂತೋಷ್ ಅವರು ಬಿಇ ಪದವಿ ಪಡೆದಿದ್ದು, ಮೇ.28 ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಘಟನೆ ಸಂಬಂಧ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com