ಮಹದಾಯಿ ನದಿ ತಿರುವು ಮಾಡಿದ್ದು ನಿಜವಾಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ರಮೇಶ್ ಜಾರಕಿಹೊಳಿ 

ರಾಜ್ಯದಿಂದ ಮಹದಾಯಿ ನದಿ ನೀರು ತಿರುವು ಮಾಡಿದರೆ ಸಚಿವ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡುತ್ತೇನೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯದಿಂದ ಮಹದಾಯಿ ನದಿ ನೀರು ತಿರುವು ಮಾಡಿದರೆ ಸಚಿವ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡುತ್ತೇನೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ನೀರಾವರಿ ಯೋಜನೆಗಳ ಬಗ್ಗೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ, ಕಳಸಾ ನಾಲಾಗೆ ನಿರ್ಮಾಣವಾಗಿರುವ ತಡೆಗೋಡೆ ಮುಟ್ಟಿಲ್ಲ. ಮಹದಾಯಿ ಸ್ಥಳ ಪರಿಶೀಲನೆ ಮಾಡೋಣ. ಒಂದು ವೇಳೆ ಸಾವಂತ್ ಅವರ ಆರೋಪ ಸಾಬೀತು ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಸವಾಲು ಹಾಕಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಬಂದು ನೋಡಿಕೊಂಡು ಹೋಗುವಂತೆ ಗೋವಾ ಮುಖ್ಯಮಂತ್ರಿಗೆ ಆಹ್ವಾನ ನೀಡುತ್ತೇನೆ. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಹಿತಾಸಕ್ತಿ ನಾವು ಕಾಪಾಡುತ್ತೇವೆ. ನೀರು ಹಂಚಿಕೆ ವಿಚಾರದಲ್ಲಿ ಉಭಯ ಮುಖ್ಯಮಂತ್ರಿಗಳ ಮಾತುಕತೆ ಅವಶ್ಯಕತೆ ಇಲ್ಲ, ಈಗಾಗಲೇ ನ್ಯಾಯಾಧೀಕರಣ ಈ ಬಗ್ಗೆ ತೀರ್ಪು ನೀಡಿದೆ ಕೊರೋನಾ ಕಾರಣದಿಂದ ಅನುಷ್ಟಾನ ಸಾಧ್ಯವಾಗಿಲ್ಲ ಎಂದರು.

ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯನ್ನು ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಯಿತು. ಕೇವಲ ಜಿಲ್ಲೆಯ ಕೊರೋನಾ ಸೋಂಕಿನ ಬಗ್ಗೆ ಮಾತ್ರ ಸಚಿವರು  ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಜನ ನಿರ್ಭಯವಾಗಿ ತಮ್ಮ ಎಂದಿನ ಕೆಲಸದಲ್ಲಿ ತೊಡಗಬೇಕು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com