ವಿವಿಧ ಕಚೇರಿಗಳಿಗೆ ಜಾಗ ನೀಡಿದರೆ ಬೆಂಗಳೂರು ವಿವಿಯ ಜೀವ ವೈವಿಧ್ಯ ತಾಣಕ್ಕೆ ಕುತ್ತು: ಎಚ್‍ಡಿ ಕುಮಾರಸ್ವಾಮಿ

ಬೆಂಗಳೂರು ವಿಶ್ವವಿದ್ಯಾಲಯ ಆವರಣದ 32 ಎಕೆರ ಜಾಗವನ್ನು ವಿವಿಧ ಕಚೇರಿಗಳಿಗೆ ನೀಡುವ ಸರ್ಕಾರದ ನಿಲುವಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ
Updated on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಆವರಣದ 32 ಎಕೆರ ಜಾಗವನ್ನು ವಿವಿಧ ಕಚೇರಿಗಳಿಗೆ ನೀಡುವ ಸರ್ಕಾರದ ನಿಲುವಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಜೀವ ವೈವಿಧ್ಯದ ತಾಣವಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಒಟ್ಟು 32 ಎಕರೆ ಪ್ರದೇಶವನ್ನು ಯೋಗ ವಿವಿ ಮತ್ತು ಇತರೆ ಎರಡು ಸಂಸ್ಥೆಗಳಿಗೆ ನೀಡಿರುವ ಸರ್ಕಾರದ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

'ಸುಮಾರು ಎರಡು ದಶಕಗಳಿಂದ ಪರಿಸರ ತಜ್ಞರು ಶ್ರಮವಹಿಸಿ ಬೆಳೆಸಿದ ಈ ತಾಣವನ್ನು ಸರ್ಕಾರ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಜೀವವೈವಿಧ್ಯ ತಾಣಕ್ಕೆ ಕುತ್ತು ತರುವ ನಿರ್ಧಾರ ಕೈಗೊಂಡಿರುವುದು ತೀವ್ರ ಅಪಾಯಕಾರಿ. ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ತಮಗೆ ಸರ್ಕಾರ ನೀಡಿದ್ದ  ಗೌರವ ಡಾಕ್ಟರೇಟ್ ಹಿಂತಿರುಗಿಸುವ ಮೂಲಕ ತಮ್ಮ ಸಾತ್ವಿಕ ಸಿಟ್ಟನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪರಿಸರ ಪ್ರೇಮಿಗಳು ಬೆಂಬಲ ಸೂಚಿಸಿದ್ದಾರೆ. ಯೋಗ ವಿವಿಗೆ 15 ಎಕರೆ, ಗುಲ್ಬರ್ಗಾ ವಿವಿಗೆ 15 ಎಕರೆ, ಸಿಬಿಎಸ್‍ಸಿ ದಕ್ಷಿಣ ಭಾರತದ ಕಚೇರಿಗೆ 2 ಎಕರೆ ಸೇರಿದಂತೆ ಒಟ್ಟು 32 ಎಕರೆಯನ್ನು ನೀಡಿರುವ ಕ್ರಮದಿಂದ  ಬೆಂಗಳೂರು ವಿವಿ ಆವರಣ ಕಾಂಕ್ರೀಟ್ ಕಾಡಾಗಲಿದೆ.

ಈ ಸಂಸ್ಥೆಗಳಿಗೆ ಬೇರೆ ಕಡೆ ಸ್ಥಳ ನೀಡುವ ಮೂಲಕ ಈ ಜೀವವೈವಿಧ್ಯ ತಾಣವನ್ನು ಸರ್ಕಾರ ಉಳಿಸಬೇಕು. ಬೆಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ 20 ವರ್ಷಗಳಲ್ಲಿ ನಿರ್ಮಾಣಗೊಂಡ  ಜೀವ ವೈವಿಧ್ಯ ವನದ ನಡುವೆ ಮೂರು ಸಂಸ್ಥೆಗಳಿಗೆ ಭೂಮಿ ನೀಡಲು ಮುಂದಾಗಿರುವ ವಿವಿ ಮತ್ತು ಸರ್ಕಾರದ ಕ್ರಮ ಖಂಡನೀಯ. ಇದರಿಂದ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಇಡೀ ಸಸ್ಯ ಸಂಪತ್ತು ನಾಶವಾಗಲಿದೆ ಎಂದು ಎಚ್ ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹಿಂದೆ ಉಪಕುಲಪತಿಗಳಾಗಿದ್ದ ಡಾ.ಕೆ.ಸಿದ್ದಪ್ಪನವರು ಇದೊಂದು ಬಯಲು ಪ್ರಯೋಗಾಲಯವಾಗಲಿದೆ ಎಂದು ನಿರೀಕ್ಷಿಸಿ ಜೀವ ವೈವಿಧ್ಯವನಕ್ಕೆ ಚಾಲನೆ ನೀಡಿದ್ದರು. ಅಂತೆಯೇ ಇದೀಗ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಪರಿಸರ ವಿಜ್ಞಾನ, ಸಾಮಾಜಿಕ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದೊಂದು  ಬಯಲು ಪ್ರಯೋಗಾಲಯವಾಗಿ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಇಂತಹ ತಾಣವನ್ನು ಧ್ವಂಸ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು, ಬೆಳೆಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com