ಆತಂಕದಲ್ಲಿದ್ದ ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್

ಕೋವಿಡ್ ಕಾರಣದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿನಿಗೆ ಸಿಎಂ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹಾಯ ಹಸ್ತ ಚಾಚಿದ್ದಾರೆ. ಈ  ಮಧ್ಯಪ್ರವೇಶದಿಂದಾಗಿ ವಿದ್ಯಾರ್ಥಿನಿ ನಿರಾತಂಕದಿಂದ ಬುಧವಾರ ಪರೀಕ್ಷೆ ಬರೆದಿದ್ದಾರೆ.
ತನುಜ
ತನುಜ
Updated on

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿನಿಗೆ ಸಿಎಂ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹಾಯ ಹಸ್ತ ಚಾಚಿದ್ದಾರೆ. ಈ  ಮಧ್ಯಪ್ರವೇಶದಿಂದಾಗಿ ವಿದ್ಯಾರ್ಥಿನಿ ನಿರಾತಂಕದಿಂದ ಬುಧವಾರ ಪರೀಕ್ಷೆ ಬರೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜ ಕರೇಗೌಡ್ರ ಬೆಂಗಳೂರಿನ ಬಸವನಗುಡಿಯ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆದಿದ್ದಾರೆ. ಕೋವಿಡ್ ನಿಂದಾದ ಬದಲಾವಣೆಗಳು ತನುಜಗೆ ನೀಟ್ ಪರೀಕ್ಷೆ ಬರೆಯಲು ಅಡ್ಡಿ ಮಾಡಿದ್ದವು. ಈ ಸಮಸ್ಯೆಯನ್ನರಿತು ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಆಕೆ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.

ಆಗಿದ್ದೇನು?

ಶಿವಮೊಗ್ಗದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿನಿ ತನುಜ ವೈದ್ಯೆಯಾಗಿ ಸಮಾಜದ ಸೇವೆ ಮಾಡುವ ಕನಸು ಹೊತ್ತಿದ್ದಾಳೆ. ಈಕೆಯ ತಂದೆ ನಾಗರಾಜ ಕೃಷಿಕರಾಗಿದ್ದು, ಮಗಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಕಳೆದ ವರ್ಷ ತನುಜ ಪಿಯುಸಿ ಪೂರ್ಣಗೊಳಿಸಿದ್ದಳು. ಈಕೆಯ ಪ್ರತಿಭೆಯನ್ನು ಮೆಚ್ಚಿದ್ದ ನವೋದಯ ಶಾಲೆಯ ಆಡಳಿತ ಮಂಡಳಿ ಪುಣೆಯಲ್ಲಿ ನಡೆಯುವ ಕೋಚಿಂಗ್‍ಗೂ ಈಕೆಯನ್ನು ಆಯ್ಕೆ ಮಾಡಿತ್ತು.

ಸೆಪ್ಟೆಂಬರ್ 13 ರಂದು ಎನ್‍ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನೀಟ್ ಪರೀಕ್ಷೆ ಏರ್ಪಡಿಸಿತ್ತು. ಈ ವೇಳೆ ತನುಜ ಅವರ ಮನೆಯ ಬಳಿ ಕಂಟೇನ್ಮೆಂಟ್ ವಲಯವನ್ನು ಘೋಷಿಸಲಾಗಿತ್ತು. ಜತೆಗೆ, ತನುಜಗೂ ಜ್ವರ ಬಂದಿದ್ದರಿಂದ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತನುಜಳ ಆಸೆಯೇ ಕಮರಿಹೋಗುವ ಆತಂಕ ಉಂಟಾಗಿತ್ತು. ಆದರೆ ನಂತರ ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ, ಎನ್‍ಟಿಎ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿತು. ಆದರೆ ಈ ಬಾರಿ ಪರೀಕ್ಷೆ ಬರೆಯಲು ಕೋವಿಡ್ ಸಂಬಂಧಿತ ವರದಿ ಹಾಗೂ ಕೆಲ ದಾಖಲೆಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಎನ್‍ಟಿಎ ಸೂಚಿಸಿತ್ತು.

ಈ ಅವಕಾಶದಿಂದ ಮತ್ತೆ ಸಂತಸಗೊಂಡ ತನುಜ, ದಾಖಲೆಗಳನ್ನು ಇ-ಮೇಲ್ ಮಾಡಲು ಉತ್ಸುಕಳಾಗಿದ್ದಳು. ಆದರೆ ಹಳ್ಳಿಯಲ್ಲಿನ ನೆಟ್ ವರ್ಕ್ ಸಮಸ್ಯೆ ಹಾಗೂ ಕೋವಿಡ್ ವರದಿಗೆ ಸಂಬಂಧಿಸಿದ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಸರಿಯಾದ ಸಮಯದಲ್ಲಿ ಇ-ಮೇಲ್ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಇದ್ದ ಮತ್ತೊಂದು ಅವಕಾಶವೂ ನೆಲ ಕಚ್ಚಿತ್ತು.

ಈ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿ ತನುಜ ಹೇಳಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್, ಮಧ್ಯಪ್ರವೇಶಿಸಿ ಸಹಾಯ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಚನೆ ನೀಡಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಎನ್ ಟಿಎ ತಾಂತ್ರಿಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಮೂಲಕ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

"ಮಗಳು ಇನ್ನು ನೀಟ್ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ಆತಂಕ ಉಂಟಾಗಿತ್ತು. ಆದರೆ ಸರಿಯಾದ ಸಮಯದಲ್ಲಿ ಸಿಎಂ, ಸಚಿವರು ಮಧ್ಯಪ್ರವೇಶ ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ದಾಖಲೆಗಳನ್ನು ಸಲ್ಲಿಸುವುದು ತಡವಾಗಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಪರೀಕ್ಷೆ ನಡೆಸುವ ಏಜೆನ್ಸಿಯವರು ಹೇಳಿದ್ದರು. ಸಿಎಂ ಹಾಗೂ ಸಚಿವರಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ತನುಜಳ ತಾಯಿ ಹಿರಿಯಮ್ಮ ಕೃತಜ್ಞತೆ ತಿಳಿಸಿದ್ದಾರೆ.

"ಸರ್ಜನ್ ಆಗಿ ಜನರ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ. ಈಗ ನೀಟ್ ಪರೀಕ್ಷೆಯನ್ನು ಯಾವುದೇ ಆತಂಕ ಇಲ್ಲದೆ ಬರೆದಿದ್ದೇನೆ. ಪರೀಕ್ಷೆ ಬಹಳ ಚೆನ್ನಾಗಿತ್ತು ಎಂದೆನಿಸಿದೆ. ಸಿಎಂ ಹಾಗೂ ಸಚಿವರಿಗೆ ಧನ್ಯವಾದ".
-ತನುಜ, ವಿದ್ಯಾರ್ಥಿನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com