ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಪ್ರತಿಷ್ಠೆ ಬದಿಗೊತ್ತಿ ಒಗ್ಗೂಡಿದ ಬಿಜೆಪಿಗರು
ಬೆಳಗಾವಿ; ಬೆಳಗಾವಿ ಡಿಸಿಸಿ (ಬೆಳಗಾವಿ ಜಿಲ್ಲಾ ಮಧ್ಯವರ್ತಿ) ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಬಣ ರಾಜಕೀಯ ಇದೀಗ ಪಕ್ಷದ ಹೈಕಮಾಂಡ್ ಮತ್ತು ಆರ್'ಎಸ್ಎಸ್ ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ತಣ್ಣಗಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಇದರಂತೆ ಗುರುವಾರ ಸಂಧಾನ ಮಾತುಕತೆ ನಡೆಸಿರುವ ಜಿಲ್ಲೆಯ ಕಮಲ ನಾಯಕರು ಇದೀಗ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದು, ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಸಲು ತೀರ್ಮಾನಿಸಿದ್ದಾರೆ.
ಡಿಸಿಸಿ ಬ್ಯಾಂಕ್'ನ 16 ನಿರ್ದೇಶಕ ಸ್ಥಾನಗಳಿಗೆ ನ.6ರಂದು ನಡೆಯಲಿರುವ ಚುನಾವಣೆ ಜಿಲ್ಲೆಯ ಬಿಜೆಪಿ ನಾಯಕರಲ್ಲಿಯೇ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು.
ಡಿಸಿಎಂ ಲಕ್ಷ್ಮಣ್ ಸವದಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರು ಅಧ್ಯಕ್ಷ ಗಾದಿಗೆ ತಮಗೆ ಇರಲಿ ಎಂದು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಶಾಸಕ ಉಮೇಶ್ ಕತ್ತಿ, ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ, ಶಾಸಕ, ಮಾಜಿ ಸಂಸದ ರಮೇಶ ಕತ್ತಿ ಬಣ ಆಕ್ಷೇಪ ವ್ಯಕ್ತಪಡಿಸಿತ್ತು.
ಇವೆರಡೂ ಬಣಗಳ ಮುಖಂಡರು ಒಂದಾಗಿ ಅವಿರೋಧ ಆಯ್ಕೆಗೆ ಶ್ರಮಿಸುವಂತೆ ಆರ್'ಎಸ್ಎಸ್ ನಾಯಕರು ನಿರ್ದೇಶನ ನೀಡಿದ್ದರು. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ, ಉಮೇಶ ಕತ್ತಿ ಸೇರಿದಂತೆ ಸ್ಪರ್ಧಾ ಆಕಾಂಕ್ಷಿಗಳು ಸಭೆ ನಡೆಸಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ್ ಸವದಿಯವರು, ಜಿಲ್ಲೆಯ ರಾಜಕಾರಣ ಒಂದಾಗಿ ಹೋಗುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದವರು. ಹಾಗಾಗಿ ವೈಮನಸ್ಸು ಇರಬಾರದು ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 16 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಮಾಡಬೇಕೆಂದು ತೀರ್ಮೀನಿಸಲಾಗಿದೆ. ಈ ಮೂಲಕ ರೈತರ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.


