
ಹಾಸನ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆ ವಿಚಾರವಾಗಿ ವರದಿ ಸಲ್ಲಿಸುವಂತೆ ದಾಖಲಿಸಿರುವ ದೂರಿನ ಅನ್ವಯ ಆಯೋಗವು ಸೂಕ್ತ ವರದಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ನ್ಯಾಯಸಮ್ಮತ ವರದಿ ಸಲ್ಲಿಸಿವಂತೆ ಮಾಜಿ ಸಚಿವ ಹಾಗೂ ಕಳೆದ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎ.ಮಂಜು ಅವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಆದಾಯಗಳನ್ನು ಮುಚ್ಚಿಟ್ಟು ನಕಲಿ ಆದಾಯ ದೃಢಿಕರಣ ಪತ್ರ ನೀಡಿದ್ದರು. ಈ ವಿಚಾರವಾಗಿ ನಾನು ಕೇಂದ್ರ ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿದ್ದೆ. ಇದನ್ನು ವಿಚಾರಣೆ ನಡೆಸುತ್ತಿರುವ ಆಯೋಗ ಈ ಸಂಬಂಧ ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ವರದಿ ನೀಡುವಂದೆ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಸೂಕ್ತ ದಾಖಲಾತಿಗಳನ್ನು ಒಳಗೊಂಡ ವರದಿಯನ್ನು ನೀಡುವಂತೆ ಮನವಿ ಮಾಡಿದರು.
ಚುನಾವಣಾ ಆಯೋಗಕ್ಕೆ ಹೀಗೆ ನಕಲಿ ದಾಖಲೆ ಸಲ್ಲಿಸಿ ನಂತರ ಸದಸ್ಯತ್ವವೇ ವಜಾಗೊಂಡ ಉದಾಹರಣಗಳಿವೆ. ಈ ಪ್ರಕರಣದಲ್ಲೂ ಹೀಗೇ ಆಗಲಿದೆ. ಹಾಗಾಗಿ ಮತ್ತೆ ನಾನೇ ಸಂಸದನಾಗುತ್ತೇನೆಂದು ಮಂಜು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರು ನಾಪತ್ರದೊಂದಿಗೆ ಸಲ್ಲಿಸಿರುವ ಆದಾಯ ದೃಢೀಕರಣ ಪತ್ರದಲ್ಲಿ ತಮ್ಮ ಆದಾಯದ ಕೆಲವೊಂದು ಅಂಶಗಳನ್ನು ಮರೆಮಾಚಿದ್ದಾರೆ. ಈ ಅಂಶವನ್ನು ಪರಿಗಣಿಸಿ ನಾನು 2019ರಲ್ಲಿಯೇ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೆ. ಈ ಪ್ರಕರಣದಲ್ಲಿ ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.
Advertisement