ಸರ್ಕಾರಿ ಗೌರವಗಳೊಂದಿಗೆ ಅಶೋಕ್ ಗಸ್ತಿ ಅಂತ್ಯ ಸಂಸ್ಕಾರ
ಪೋತಗಲ್: ಕೊರೋನಾ ಸೋಂಕಿಗೆ ತುತ್ತಾಗಿ ಗುರುವಾರ ರಾತ್ರಿ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ರಾಯಚೂರಿನಲ್ಲಿ ನೆರವೇರಿತು.
ಅಶೋಕ್ ಗಸ್ತಿ ಅವರ ಹುಟ್ಟೂರಾದ ರಾಯಚೂರು ಜಿಲ್ಲೆಯ ಪೋತಗಲ್‌ನಲ್ಲಿ ಇಂದು ಅಶೋಕ್ ಗಸ್ತಿ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ರಾಯಚೂರಿನ ಪೋತಗಲ್ ರಸ್ತೆಯಲ್ಲಿರುವ ಕೊರೊನಾದಿಂದ ಮೃತರಿಗೆ ಮೀಸಲಿರಿಸಿದ ರುದ್ರಭೂಮಿಯಲ್ಲಿ ಗಸ್ತಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಗಸ್ತಿ ಅವರು ಕೊರೊನಾದಿಂದಾಗಿ ಮೃತಪಟ್ಟ ಹಿನ್ನೆಲೆ ಕೊರೊನಾ ನಿಯಮದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಅದರಂತೆ ಬೆಂಗಳೂರಿನಿಂದ ಗಸ್ತಿ ಅವರ ಪಾರ್ಥಿವ ಶರೀರ ರಾಯಚೂರಿನ ಅವರ ನಿವಾಸಕ್ಕೆ ಆಗಮಿಸಿತು. ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಅಂಬ್ಯುಲೆನ್ಸ್ ಮೂಲಕವೇ ಪೋತಗಲ್‌ನ ಸ್ಮಶಾನಕ್ಕೆ ರವಾನೆ ಮಾಡಲಾಯಿತು. ಕೊರೋನಾ ಮಾರ್ಗಸೂಚಿ ಹಿನ್ನಲೆಯಲ್ಲಿ ಬೆಂಬಲಿಗರಿಗೆ ದೂರದಿಂದಲೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಸೆಪ್ಟೆಂಬರ್ 2ರಂದು ಗಸ್ತಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಗುರುವಾರ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ