ಅಗತ್ಯ ವಸ್ತುಗಳ 'ಹೋಮ್ ಡೆಲಿವರಿ' ಸೇವೆಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್.ಅಶೋಕ್

ಅಗತ್ಯ ವಸ್ತುಗಳ 'ಹೋಮ್ ಡೆಲಿವರಿ' ಸೇವೆಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್.ಅಶೋಕ್
ಅಗತ್ಯ ವಸ್ತುಗಳ 'ಹೋಮ್ ಡೆಲಿವರಿ' ಸೇವೆಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್.ಅಶೋಕ್

ಬೆಂಗಳೂರು: ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು 'ಹೋಮ್ ಡೆಲಿವರಿ' ಸೇವೆ/ಸಹಾಯವಾಣಿ (080 6191 4960)ಗೆ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಏ.12 ರಂದು ಮೇಯರ್ ಕಚೇರಿಯಲ್ಲಿ ಚಾಲನೆ ನೀಡಿದರು. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗೌತಮ್ ಕುಮಾರ್ ಜೈನ್, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತರಾದ ರೋಹಿಣಿ ಕಟೋಚ್ ಉಪಸ್ಥಿತರಿದ್ದರು.

ಕತ್ರಿಗುಪ್ಪೆ ವಾರ್ಡ್ ನಲ್ಲಿ ಹೋಮ್ ಡೆಲಿವರಿ' ಸೇವೆ/ಸಹಾಯವಾಣಿಯನ್ನು ಪ್ರಾಯೋಗಿಕ ಹಂತದಲ್ಲಿ ಆರಂಭಿಸಲಾಗಿತ್ತು. ಜನರಿಂದ ಉತ್ತಮ ಸ್ಪಂದನೆ ದೊರೆತ ನಂತರ ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿನ 3 ವಿಧಾನಸಭಾ ಕ್ಷೇತ್ರಗಳಿಗೆ ಹೋಮ್ ಡೆಲಿವರಿ ಸೇವೆಯನ್ನು ವಿಸ್ತರಿಸಲಾಗಿದೆ.

ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗವು 3 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಜಯನಗರ, ಬಸವನಗುಡಿ, ಪದ್ಮನಾಭ ನಗರ ಮತ್ತು ಚಿಕ್ಕಪೇಟೆ ಕ್ಷೇತ್ರದ ಕೆಲವು ಭಾಗಗಳನ್ನು ಒಳಗೊಂಡಿದೆ. ಈ ವ್ಯಾಪ್ತಿಯ ನಾಗರಿಕರು 'ಕೋವಿಡ್-19 ಹೋಮ್ ಡೆಲಿವರಿ' ಸಹಾಯವಾಣಿ 080-6191-4960 ಸಂಖ್ಯೆಗೆ ಕರೆ ಮಾಡುವ ಮೂಲಕ ಅಗತ್ಯ ವಸ್ತುಗಳನ್ನು ನೇರವಾಗಿ ಮನೆ ಬಾಗಿಲಿಗೆ ಪಡೆಯಬಹುದು.

ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸಿ ಹೋಮ್ ಡೆಲಿವರಿ ಪಡೆಯಬಹುದು!

'Hi' ಎಂದು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಕೆಲವೊಂದು ಸೂಚನೆಗಳನ್ನು  ಪಾಲಿಸಿದಲ್ಲಿ ವಾಟ್ಸಾಪ್ ಮುಖಾಂತರವೂ ಹೋಮ್ ಡೆಲಿವರಿ ಸೇವೆ ಪಡೆಯಬಹುದಾಗಿದೆ.

ನಾಗರಿಕರು ತಮ್ಮ ಸಮೀಪದ ಅಂಗಡಿಗೆ ಕರೆ ಮಾಡಿ ಹೋಮ್ ಡೆಲಿವರಿ ಸೇವೆ ಮುಖಾಂತರ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆ ಅಂಗಡಿಯು ಹೋಮ್ ಡೆಲಿವರಿ ಸೇವೆ ಪೂರೈಸುವ ವ್ಯವಸ್ಥೆ ಹೊಂದಿರದಿದ್ದಲ್ಲಿ ಹೋಮ್ ಡೆಲಿವರಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಡೆಲಿವರಿ ಸಹಾಯಕರು ಸಂಬಂಧಪಟ್ಟ ಅಂಗಡಿಯಿಂದ ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುತ್ತಾರೆ. ಒಟ್ಟು 1,926 ಅಂಗಡಿಗಳ ಸಹಯೋಗದೊಂದಿಗೆ ಹೋಮ್ ಡೆಲಿವರಿ ಸೇವೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ 958 ಸಾಮಾನ್ಯ/ಕಿರಾಣಿ ಅಂಗಡಿಗಳು, 323 ತರಕಾರಿ ಮಳಿಗೆಗಳು, 479 ಔಷಧಿ ಅಂಗಡಿಗಳು, 82 ಮಾಂಸದ ಅಂಗಡಿಗಳು ಮತ್ತು 84 ಇತರೆ ಅಂಗಡಿಗಳು ಪ್ರತಿ ದಿನ ತೆರೆಯಲ್ಪಡುತ್ತವೆ.

ನಾಗರಿಕರು ಸಹಾಯವಾಣಿ 080-6191-4960 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು,ವಿಳಾಸ ಮತ್ತು ಅಗತ್ಯ ವಸ್ತುಗಳ ಪಟ್ಟಿಯನ್ನು ನೀಡಿದಲ್ಲಿ ನಮ್ಮ ಸ್ವಯಂಸೇವಕರು ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ. ಅಥವಾ ವಾಟ್ಸಾಪ್ ಮುಖಾಂತರ 080 6191 4960 ಸಂಖ್ಯೆಗೆ 'Hi' ಎಂದು ಸಂದೇಶ ಕಳುಹಿಸಿದಲ್ಲಿ ಕನ್ನಡದಲ್ಲಿ ಸೂಚನೆಗಳನ್ನು ಒಳಗೊಂಡ  ಧ್ವನಿ ಮುದ್ರಿತ ಸಂದೇಶವನ್ನು ಕಳುಹಿಸಲಾಗುತ್ತದೆ. ಗ್ರಾಹಕರು ತಮ್ಮ ಹೆಸರು, ವಿಳಾಸ(ಗೂಗಲ್ ಮ್ಯಾಪ್ಸ್ ಮುಖಾಂತರ ಲೋಕೇಶನ್ ಸಹ ಶೇರ್ ಮಾಡಬಹುದು)ವನ್ನು ಕಳುಹಿಸಬೇಕು. ನಂತರ ತಮ್ಮ ಅಗತ್ಯ ವಸ್ತುಗಳ ಪಟ್ಟಿಯನ್ನು ಟೈಪ್ ಮಾಡಿ ಅಥವಾ ಒಂದು ಹಾಳೆಯಲ್ಲಿ ಬರೆದು ಅದರ ಫೋಟೋ ಅನ್ನು ಕಳುಹಿಸಬೇಕು. ಔಷಧಿಗಳ ಅವಶ್ಯಕತೆ ಇದ್ದಲ್ಲಿ ಡಾಕ್ಟರ್ ರಿಂದ ಪಡೆದ ಪ್ರೀಸ್ಕ್ರಿಪ್ಶನ್ ನ ಫೋಟೋ ಕಳುಹಿಸಿದಲ್ಲಿ ನಿಮ್ಮ ಆರ್ಡರ್ ಅನ್ನು ಪರಿಗಣಿಸಲಾಗುವುದು. ನಂತರ ಗ್ರಾಹಕರ ಮೊಬೈಲ್ ಗೆ ಧೃಢೀಕರಣ ಸಂದೇಶ ಕಳುಹಿಸಲಾಗುವುದು. ಧೃಢೀಕರಣ ಸಂದೇಶ ಕಳುಹಿಸಿದ ನಂತರ ಸಂಬಂಧಪಟ್ಟ ಅಂಗಡಿ/ಡೆಲಿವರಿ ಸಹಾಯಕರು ಮತ್ತೊಮ್ಮೆ ಕರೆ ಮಾಡಿ ಬಿಲ್ ಮೊತ್ತದ ಕುರಿತು ತಿಳಿಸುತ್ತಾರೆ. ಬಿಲ್ ಪಾವತಿ ಮಾಡಿ ಅಗತ್ಯ ವಸ್ತುಗಳನ್ನು ಪಡೆಯತಕ್ಕದ್ದು. ಈ ಸೇವೆಯು ಒಂದು ಕುಟುಂಬಕ್ಕೆ ವಾರಕ್ಕೆ 2 ಸಲ ಮಾತ್ರ ಲಭ್ಯವಿರಲಿದೆ" ಎಂದು ಹೋಮ್ ಡೆಲಿವರಿ ಸೇವೆಯ ಕಾರ್ಯ ನಿರ್ವಹಣೆ ವಿಧಾನದ ಕುರಿತು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರಿನ ಕೆಲವು ಟೆಕ್ ಕಂಪನಿಗಳ ಸಹಕಾರದಿಂದ ಈ ಸೇವೆ/ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಕಲೆರಾ ಸಂಸ್ಥೆ ಸಹಾಯವಾಣಿ/ತಂತ್ರಾಂಶ ಅಭಿವೃದ್ಧಿಪಡಿಸಲು ತಾಂತ್ರಿಕ ಸಹಕಾರ ನೀಡಿದ್ದು, ಕಾರ್ಟೂನ್ ಮ್ಯಾಂಗೋ-ಐ ಟಿ ಡಬ್ಲ್ಯೂ ಕನ್ಸಲ್ಟಿಂಗ್ ಸಂಸ್ಥೆಯು ಸಹ ತಂತ್ರಾಂಶ ಅಭಿವೃದ್ಧಿಪಡಿಸುವಲ್ಲಿ ಕೈ ಜೋಡಿಸಿರುತ್ತದೆ. ರಾಪಿಡೋ, ಡಂಜೋ, ಎಲಿಫಾಂಟ್ ಇಯರ್ ಕನ್ಸಲ್ಟಿಂಗ್ ಮತ್ತು ಐ-ಸ್ಪಿರ್ಟ್ ಸಂಸ್ಥೆಗಳು ಸಹ ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿರುವುದು ಈ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಸಹಾಯಕವಾಗಿದೆ. ಫಾರ್ಮ್ ಈಜಿ, ಸ್ಪಾಟ್ ಕೇರ್ ಸಂಸ್ಥೆಗಳು ಔಷಧಿ ಸಾಮಗ್ರಿಗಳನ್ನು ಪೂರೈಸುವಲ್ಲಿ ಸಹಕಾರ ನೀಡುತ್ತಿವೆ. ಇದಲ್ಲದೇ ಬಿಗ್ ಬಜಾರ್,ಸ್ಟೋರ್ ಸೆ, ಶಾಪ್ ಜಿ, ಕ್ಲೋವರ್ ವೆಂಚರ್ಸ್ ಮತ್ತು ನಿಂಜಾ ಕಾರ್ಟ್ ಸಂಸ್ಥೆಗಳು ಅಗತ್ಯ ವಸ್ತುಗಳು, ದಿನಸಿ,ತರಕಾರಿ ಸಾಮಗ್ರಿಗಳನ್ನು ಮನೆ/ಅಪಾರ್ಟ್ಮೆಂಟ್ ಗಳಿಗೆ ತಲುಪಿಸುವಲ್ಲಿ ನಮ್ಮೊಂದಿಗೆ ಸಹಕಾರ ಒದಗಿಸಿರುತ್ತಾರೆ. 'ಹೌಸ್ ಜಾಯ್' ನಂತಹ ಸಂಸ್ಥೆಗಳು ಕರೋನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುವುದನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳು, ಪೊಲೀಸ್ ಕಚೇರಿಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸುವಲ್ಲಿ ನಿರತವಾಗಿದೆ ಎಂದು ಸಂಸದರು ತಿಳಿಸಿದ್ದಾರೆ. 

ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಅಶೋಕ್, "ನಾಗರಿಕರು ತಮಗೆ ಅನುಕೂಲವಾಗುವ ವಿಧಾನ ಅನುಸರಿಸಿ, ಕರೆ ಮಾಡುವ ಮೂಲಕ ಅಥವಾ ವಾಟ್ಸಾಪ್ ಅನ್ನು ಬಳಸಿಕೊಳ್ಳುವ ಮುಖಾಂತರ ಈ 'ಹೋಮ್ ಡೆಲಿವರಿ' ಸೇವೆಯನ್ನು ಬಳಸಿಕೊಂಡು, ಮನೆಯಿಂದ ಯಾರೂ ಅಗತ್ಯ ವಸ್ತುಗಳಿಗಾಗಿ ಹೊರ ಬರದಂತೆ ಮುಂಜಾಗ್ರತೆ ವಹಿಸಬೇಕಾಗಿದೆ. ಜನರು ಸರ್ಕಾರದೊಂದಿಗೆ ಸಹಕರಿಸಬೇಕು" ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com