ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ: ಘಟನೆ ಖಂಡಿಸಿದ ರಾಜಕೀಯ ನಾಯಕರು

ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮಂದಿಯನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣವನ್ನು ರಾಜ್ಯದ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಪಾದರಾಯನಪುರ ಗಲಾಟೆ
ಪಾದರಾಯನಪುರ ಗಲಾಟೆ

ಬೆಂಗಳೂರು: ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮಂದಿಯನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣವನ್ನು ರಾಜ್ಯದ ರಾಜಕೀಯ ನಾಯಕರು ತೀವ್ರವಾಗಿ  ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ ತಪ್ಪು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿವ ಕೆ ಸುಧಾಕರ್,  'ಪಾದರಾಯನ ಪುರದ ಗಲಾಟೆಯ ಕಾರಣೀಭೂತರಾಗಿರುವವರನ್ನು ಕೊಡಲೇ ಬಂಧಿಸಬೇಕು. ಇವರಿಗೂ ದೇಶದ್ರೋಹಿ ಗಳಿಗೂ ವ್ಯತ್ಯಾಸವಿಲ್ಲ' ಎಂದು ಕಿಡಿಕಾರಿದ್ದಾರೆ.

ಇನ್ನು ಸಚಿವ ಸಿಟಿ ರವಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದು, ಹೇಡಿಗಳ ಗುಂಪು ಸಾಮೂಹಿಕವಾಗಿ ಪೊಲೀಸರು, ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ,  ಜ್ಯಾತ್ಯಾತೀತರು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಜೀವ ರಕ್ಷಣೆಗಾಗಿ ಅವರ ಜೀವವನ್ನೇ ಪಣಕ್ಕಿಟ್ಟು ಆರೋಗ್ಯ ಕಾರ್ಯಕರ್ತರು ಹಗಲಿರುಳು ಶ್ರಮಿಸತ್ತಿದ್ದರೆ ಅವರ ಮೇಲೆಯೇ ಹಲ್ಲೆ ನಡೆಸಿರುವುದು ಖಂಡನೀಯ ಮತ್ತು ಅಕ್ಷಮ್ಯ. ಇಂತಹ ದೇಶದ್ರೋಹಿಗಳ  ವಿರುದ್ಧ ಯಾವುದೇ ಕಾರಣಕ್ಕೂ ಮೃದು ಧೋರಣೆ ತೊರಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು, ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಹಲ್ಲೆ ಮಾಡಿರುವವರನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಸಿಎಂ ಹಾಗೂ ಗೃಹ ಸಚಿವರು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಇನ್ನು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಅವರು ಮಾತನಾಡಿ, ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪೊಲೀಸರ ಮೇಲಿನ ಹಲ್ಲೆಗೆ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ ದಾಳಿ ಮಾಡಿದ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.

ಇತ್ತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಲ್ಲಿನ ಅಲ್ಪ ಸಮುದಾಯದವರಿಗೆ ಕ್ವಾರಂಟೈನ್ ಅಂದ್ರೆ ಗೊತ್ತಿಲ್ಲ. ಕ್ವಾರಂಟೈನ್ ಅಂದ್ರೆ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ ಎಂದು ಭಾವಿಸಿದ್ದಾರೆ. ಅದರ ಅರಿವಿಲ್ಲದೇ ಅವರು ದಾಳಿ ಮಾಡಿರಬಹುದು. ಆದರೂ ಇದು ತಪ್ಪು. ಕ್ವಾರಂಟೈನ್ ಅಂದರೆ ನಿಮ್ಮನ್ನು ಒಂದು ಜಾಗದಲ್ಲಿಟ್ಟು ಚಿಕಿತ್ಸೆ ನೀಡಿ ನೀವು ಗುಣಮುಖರಾದ ಬಳಿಕ ಸುರಕ್ಷಿತವಾಗಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.

ಪೊಲೀಸರ ಮೇಲಿನ ಹಲ್ಲೆ ಅಕ್ಷಮ್ಯ, ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆಗೊಳಪಡಿಸಿ. ವೈದ್ಯರು, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಪ್ರಾಣ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಅವರ ಮೇಲಿನ ಹಲ್ಲೆ ಸರಿಯಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.

ಇನ್ನು ಪಾದರಾಯನಪುರ ಕ್ಷೇತ್ರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಮಾತನಾಡಿ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರ ಆಗಿದ್ದರಿಂದ ಪೊಲೀಸರು ಸಹ ಕಡಿಮೆ ಸಂಖ್ಯೆಯಲ್ಲಿದ್ದರು. ಈ ರೀತಿ ಘಟನೆ ನಡೆದಿದ್ದು, ಇದೇ ಮೊದಲು ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ದಾಳಿಕೋರರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com