ಆಪ್ತಮಿತ್ರ ಸಹಾಯವಾಣಿ, ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ

 ಕೊರೋನಾ ವಿರುದ್ಧದ ಕಠಿಣ ಹೋರಾಟದಲ್ಲಿ ರಾಜ್ಯದ ಜನರನ್ನು ಒಗ್ಗೂಡಿಸಲು ರಾಜ್ಯ ಸರ್ಕಾರ " ಆಪ್ತಮಿತ್ರ" ಸಹಾಯವಾಣಿ, ಮೊಬೈಲ್ ಆ್ಯಪ್ ಆರಂಭಿಸಿದೆ.
ಆಪ್ತಮಿತ್ರ ಸಹಾಯವಾಣಿ, ಮೊಬೈಲ್ ಆ್ಯಪ್ ಲೋಕಾರ್ಪಣೆ ಗೊಳಿಸಿದ ಸಿಎಂ ಯಡಿಯೂರಪ್ಪ
ಆಪ್ತಮಿತ್ರ ಸಹಾಯವಾಣಿ, ಮೊಬೈಲ್ ಆ್ಯಪ್ ಲೋಕಾರ್ಪಣೆ ಗೊಳಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ವಿರುದ್ಧದ ಕಠಿಣ ಹೋರಾಟದಲ್ಲಿ ರಾಜ್ಯದ ಜನರನ್ನು ಒಗ್ಗೂಡಿಸಲು ರಾಜ್ಯ ಸರ್ಕಾರ " ಆಪ್ತಮಿತ್ರ" ಸಹಾಯವಾಣಿ, ಮೊಬೈಲ್ ಆ್ಯಪ್ ಆರಂಭಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ 14410 ಸಂಖ್ಯೆಯ ಆಪ್ತಮಿತ್ರ  ಸಹಾಯವಾಣಿ ಹಾಗೂ ಆಪ್ತಮಿತ್ರ ಮೊಬೈಲ್ ಆ್ಯಪ್‌ ಅನ್ನು ಲೋಕಾರ್ಪಣೆಮಾಡಿದರು.

ಬಳಿಕ ಮಾತನಾಡಿದ ಅವರು, ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆಯಾಗಿರುವ ಆಪ್ತಮಿತ್ರ ಸಹಾಯವಾಣಿ" ಮತ್ತು " ಆಪ್ತಮಿತ್ರ ಆಪ್‌"ಗೆ ಚಾಲನೆ ನೀಡಿದ್ದೇನೆ. ಜ್ವರ, ಒಣ ಕೆಮ್ಮು, ಉಸಿರಾಟದ ತೊಂದರೆ, ಇನ್‌ಫ್ಯುಯೆನ್ಜಾ ಮಾದರಿಯ ರೋಗ ಲಕ್ಷಣಗಳಿದ್ದಲ್ಲಿ ಆಪ್ತಮಿತ್ರಾ ಸಹಾಯವಾಣಿ 14410 ಕರೆ ಮಾಡಿ ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.

ಕೋವಿಡ್‌ 19 ಲಕ್ಷಣ ಇರುವ ವ್ಯಕ್ತಿಗಳಿಗೆ ಸಹಾಯವಾಣಿ ಮೂಲಕ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಕೋವಿಡ್ 19 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುವ ಮೂಲಕ ರೋಗ ಹರಡುವ ಸಾಧ್ಯತೆಗಳನ್ನು ಕೂಡ ಕಡಿಮೆ ಮಾಡಬಹುದಾಗಿದೆ. ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯವಸ್ತುಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.

ಸಾರ್ಜನಿಕರು ಕೂಡ ಬಹುತೇಕ ಸಹಕಾರ ನೀಡುತ್ತಿದ್ದಾರೆ. ಮನೆಯಿಂದ ಹೊರಗೆ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಡೋರ್ ಡೆಲಿವರಿ ಸಹಾಯವಾಣಿಗೆ ನಿನ್ನೆ ಚಾಲನೆ ನೀಡಲಾಗಿತ್ತು. ಇಂದು ಆಪ್ತಮಿತ್ರಾ ಸಹಾಯವಾಣಿಗೆ ಚಾಲನೆ ನೀಡಿದ್ದೇನೆ. ರಾಜ್ಯದಲ್ಲಿ ಕೋಡಿವ್ 19 ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವಯಂ ಸೇವಾ ಸಂಸ್ಥೆಗಳು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮವನ್ನು ಗೌರವಿಸಿ, ಸಹಕರಿಸಿ, ಶೀಘ್ರದಲ್ಲಿಯೇ ಕೋವಿಡ್ 19 ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸ ನನ್ನದು ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮತ್ತಿತರರು ಪಾಲ್ಗೊಂಡಿದ್ದರು.

ಸಹಾಯವಾಣಿಯ ಉದ್ದೇಶ ಮತ್ತು ಕಾರ್ಯಾಚರಣೆ ವಿವರ

ರಾಜ್ಯದ ಎಲ್ಲಾ ನಿವಾಸಿಗಳಿಗೆ ವಿಶೇಷವಾಗಿ ಕೊರೋನಾ ಹಾಟ್‌ ಸ್ಪಾಟ್‌ ಪ್ರದೇಶಗಳಲ್ಲಿ ವಾಸಿಸುವವರಿಗೆ ತಲುಪಿ ಇನ್‌ ಫ್ಲೂಎನ್ಜಾ ತರಹದ ಅನಾರೋಗ್ಯ, ತೀವ್ರ ಉಸಿರಾಟದ ಸೋಂಕು, ಕೊರೋನಾ ರೋಗ ಲಕ್ಷಣಗಳಂತಹ ಅಥವಾ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯ ಹೊಂದಿರುವವರನ್ನು ಈ ಆಪ್ ಮೂಲಕ ಗುರುತಿಸಲಾಗುತ್ತದೆ.

ಕಡಿಮೆ ಅಪಾಯವಿರುವ ಆದರೆ ಕೊರೋನಾ ತರಹದ ಕೆಲವು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರಿಗೆ ಕೌಂಟರ್ ನಲ್ಲಿ ದೊರೆಯುವ ಔಷಧಿಗಳನ್ನು ಟೆಲಿಮೆಡಿಸಿನ್‌ ಬೆಂಬಲದೊಂದಿಗೆ ಒದಗಿಸುವುದು ಮತ್ತು ಸ್ವಯಂ ದಿಗ್ಭಂಧನಕ್ಕೆ ಒಳಪಡುವ ಬಗ್ಗೆ ಅವರಿಗೆ ಸಮಾಲೋಚಿಸಿ ಸೂಚಿಸಲಾಗುತ್ತದೆ.

ಕಡಿಮೆ ಅಪಾಯದ ಎಲ್ಲಾ ಪ್ರಕರಣಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಅವರನ್ನು ಹಿಂಬಾಲಿಸಲು ಸಹಾಯವಾಗುತ್ತದೆ. ಮಧ್ಯಮದಿಂದ ಹೆಚ್ಚಿನ ಹಂತದವರೆಗೆ ಕೊರೋನಾ ಅಪಾಯವನ್ನು ಹೊಂದಿರುವವರನ್ನು ನಿರ್ಧರಿಸುವುದು ಮತ್ತು ಅವರನ್ನು ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜ್ವರದ ಕ್ಲಿನಿಕ್‌ ಅಥವಾ ಕೊರೋನಾ ಸ್ಕ್ರೀನಿಂಗ್ ಕೇಂದ್ರಗಳಿಗೆ ಪಡೆಯಲು ಇದು ನೆರವಾಗಲಿದೆ.

ಹಾಟ್‌ಸ್ಪಾಟ್‌ಗಳು, ಕ್ಲಸ್ಟರ್‌ಗಳು ಮತ್ತು ರೋಗ ಹೊರಹೊಮ್ಮುತ್ತಿರುವ ಪ್ರದೇಶಗಳಲ್ಲಿ ದಿಗ್ಬಂಧನ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಇದೇ ರೀತಿ ರೋಗಲಕ್ಷಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಲು ಪ್ರಸ್ತುತ ಲಾಕ್‌ಡೌನ್‌ ಅನ್ನು ಶ್ರೇಣೀಕೃತ ಸಡಿಲಗೊಳಿಸುವ ನಿರ್ಧಾರಗಳನ್ನು ತಿಳಿಯಲು ಇನ್‌ಫ್ಯುಎನ್ಜಾ ತರಹದ ಅನಾರೋಗ್ಯ ಪ್ರಕರಣಗಳನ್ನು ವಿಶ್ಲೇಷಿಸಲು ಇದು ಸಹಾಯವಾಗಲಿದೆ.

ಆಪ್ತಮಿತ್ರ ಸಹಾಯವಾಣಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ 4 ಕೇಂದ್ರಗಳು, ಮೈಸೂರು, ಮಂಗಳೂರು (ಬಂಟ್ವಾಳ) ಹೀಗೆ 6 ಸ್ಥಳಗಳಲ್ಲಿ ಒಟ್ಟು 300 ಆಸನ ಸಾಮರ್ಥ್ಯ ಹೊಮದಿರುವ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಎರಡು ಹಂತದ ವ್ಯವಸ್ಥೆಯಾಗಿದ್ದು, ಮೊದಲ ಹಂತವನ್ನು ಆಯುಷ್/ನರ್ಸಿಂಗ್/ ಫಾರ್ಮಾ ಅಂತಿಮ ವರ್ಷದ ಸ್ವಯಂ ಸೇವಕ ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ. ಮತ್ತು ಎರಡನೇ ಹಂತವನ್ನು ಎಂಬಿಬಿಎಸ್, ಇಂಟಿಗ್ರೇಟೆಡ್‌ ಮೆಡಿಸಿನ್, ಆಯುಷ್ ಸ್ವಯಂ ಸೇವಕ ವೈದ್ಯರು ನಿರ್ವಹಿಸಲಿದ್ದು, ಅಪಾಯದ ಮೌಲ್ಯಮಾಪನ, ಸಮಾಲೋಚನೆ, ಟೆಲಿಮಡಿಸಿನ್ ಹಾಗು ವಿವರವಾದ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಜ್ಞ ವೈದ್ಯರಿಗೆ ಉಲ್ಲೇಖಿಸಲು ಆಯಾ ಸ್ಥಳಗಳಿಂದ ಸಂಪರ್ಕಿಸುತ್ತಾರೆ. ಸಹಾಯವಾಣಿ ರಾಜ್ಯದ ಎಲ್ಲಾ ಭಾಗಗಳ ನಿವಾಸಿಗಳನ್ನು ಒಳಗೊಳ್ಳುತ್ತದೆ. ಆಪ್ತಮಿತ್ರಾ ಆಪ್‌ ವೈದ್ಯರಿಂದ ನೇರವಾಗಿ ಟೆಲಿಮೆಡಿಸಿನ್‌ ಸಲಹೆ ಪಡೆಯಲು ಸ್ಮಾರ್ಟ್‌ ಫೋನ್‌ ಹೊಂದಿರುವವರಿಗಾಗಿ ಇರುತ್ತದೆ. ರಾಜ್ಯದ ಎಲ್ಲಾ ನಿವಾಸಿಗಳನ್ನು ತಲುಪಲು ಎಸ್‌ಎಂಎಸ್, ಸೋಷಿಯಲ್ ಮೀಡಿಯಾ, ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮೀಡಿಯಾ ಹಾಗೂಹೊರಹೋಗುವ ಕರೆಗಳ ಮೂಲಕ ಸಮಗ್ರ ಬಹುಮಾಧ್ಯಮ ಅಭಿಯಾನವನ್ನು ಕೈಗೊಳ್ಳಲಾಗುವುದು. ಈ ಸಂಪೂರ್ಣ ಪರಿಹಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊಂದಿದೆ. ನಾಸ್ಕಾಮ್‌ ನ ಆಶ್ರಯದಲ್ಲಿ ಇನ್ಫೋಸಿಸ್ ಬಿಪಿಎಂ ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್ ಮೊಬೈಲ್ ಅಪ್ಲಿಕೇಷನ್ ಮತ್ತು ಬ್ಯಾಂಕ್ ಎಂಡ್‌ ಸಿಆರ್‌ಎಂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪಾಲುದಾರರಾಗಿ ಇನ್ಫೋಸಿಸ್, ಎಚ್‌ಜಿಎಸ್, ಕಾನ್ಸೆಂಟ್ರಿಕ್ಸ್, ಎಂಪಾಸಿಸ್ ಮತ್ತು ಎಚ್‌ಸಿಎಲ್‌ ಒದಗಿಸಿರುವ ಸಂಪರ್ಕ ಕೇಂದ್ರ ಮೂಲಸೌಲಭ್ಯದೊಂದಿಗೆ ಇನ್ಫೋಸಿಸ್ ಬಿಪಿಎಂ ಮತ್ತು ಹಿಂದೂಜಾ ಗ್ಲೋಬಲ್ ಸೆಲ್ಯೂಷನ್ ಒಟ್ಟಾಗಿ ಮಲ್ಟಿ ಚಾನೆಲ್‌ ಗ್ರಾಹಕರ ಸಂಪರ್ಕ ಪರಿಹಾರವನ್ನು ವಿನ್ಯಾಸಗೊಳಿಸಿ, ನಿರ್ಮಿಸಿ ಕಾರ್ಯಗತಗೊಳಿಸಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಭಿವೃದ್ಧಿ ಮತ್ತು ಸ್ಥಿರೀಕರಣ ಪೂರ್ಣಗೊಂಡ ನಂತರ ಇಡೀ ವ್ಯವಸ್ಥೆ ಮತ್ತು ಮಾಹಿತಿಯನ್ನು ರಾಜ್ಯ ದತ್ತಾಂಶ ಕೇಂದ್ರದಲ್ಲಿ ಹೋಸ್ಟ್ ಮಾಡಲಾಗುತ್ತದೆ. ಈಉಪಕ್ರಮಕ್ಕೆ ಉದಾರ ಬೆಂಬಲ ನಿಡಿದ  ನಾನ್ಕಾಮ್‌ ಮತ್ತು ಐದು ಟೀಟಿ/ಬಿಪಿಎಂ ಪಾಲುದಾರರಿಗೆ ಧನ್ಯವಾದ ಅರ್ಪಿಸುತ್ತೇವೆ. ಆಪ್ಮಮಿತ್ರಾ ಸಹಾಯವಾಣಿ 14410 ಅನ್ನು ಕೊರೋನಾ ಸಂಬಂಧಿತ ಪ್ರಶ್ನೆಗಳು, ಟೆಲಿಮೆಡಿಸಿನ್, ಸಮಾಲೋಚನೆ ಹಾಗೂ ಪರೀಕ್ಷೆ ಚಿಕಿತ್ಸೆಗೆ ಅನುಕೂಲವಾಗುವಂತೆ ಅಗತ್ಯವಿರುವವರಿಗೆ ಪ್ರತ್ಯೇಕವಾಗಿ ಉದ್ದೇಶಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗವನ್ನು ನಿವಾರಿಸುವ ನಮ್ಮ ಸಾಮೂಹಿಕ ಪ್ರಯತ್ನಗಳಲ್ಲಿ ಈ ಸಹಾಯವಾಣಿ ಜೊತೆಗೆ ಕೊರೋನಾ ಕಾಯಿಲೆಗೆ ಹೊರತಾದ ಆರೋಗ್ಯ ಸಮಸ್ಯೆಗಳಿಗೆ ಸಾಮಾನ್ಯ ಸಹಾಯವಾಣಿ 104, ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ತುರ್ತು ಸಹಾಯವಾಣಿ 108 ಮತ್ತು ಆಹಾರ ಸಂಬಂಧಿತ ಸಮಸ್ಯೆಗಳಿಗೆ 155214 ಪೂರಕವಾಗಿರುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com