ಸಿಎಂ ಯಡಿಯೂರಪ್ಪ 8 ರಿಂದ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ: ಸಚಿವ ಡಾ. ಸುಧಾಕರ್

ಕಳೆದ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದವರೆಲ್ಲರೂ ಕ್ವಾರಂಟೈನ್ ಗೆ ಒಳಗಾಗಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ
ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದವರೆಲ್ಲರೂ ಕ್ವಾರಂಟೈನ್ ಗೆ ಒಳಗಾಗಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಕಳೆದ ವಾರದಿಂದ ಹಲವು ಕಾರ್ಯಕ್ರಮಗಳಲ್ಲಿ ಯಡಿಯೂರಪ್ಪನವರ ಜೊತೆ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲಾಗುತ್ತಿದೆ ಎನ್ನುತ್ತಿದ್ದಾರೆ. ಸ್ವತಃ ವೈದ್ಯರಾಗಿರುವ ಸುಧಾಕರ್ ಮುಖ್ಯಮಂತ್ರಿಗಳಿಗೆ ಸ್ವಲ್ಪ ಕಫ ಇದೆ, ಬೇರೆ ಹೃದಯದ ಸಮಸ್ಯೆಯೇನು ಕಂಡುಬಂದಿಲ್ಲ ಎಂದಿದ್ದಾರೆ.

ಯಡಿಯೂರಪ್ಪನವರು ಹಾಗಾದರೆ ಆಸ್ಪತ್ರೆಯಲ್ಲಿ ಎಷ್ಟು ದಿನಗಳ ಕಾಲ ಇರಬೇಕಾಗಿ ಬರಬಹುದು ಎಂದು ಪಿಟಿಐ ಸುದ್ದಿಸಂಸ್ಥೆ ಸಂಪರ್ಕಿಸಿ ಕೇಳಿದಾಗ, 8ರಿಂದ 10 ದಿನ ಅವರು ಆಸ್ಪತ್ರೆಯಲ್ಲಿ ಇರಬೇಕಾಗಿ ಬರಬಹುದು, ತಮ್ಮ ಕಚೇರಿ ಸಿಬ್ಬಂದಿಗಳಲ್ಲಿ ಕೆಲವರಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ತಾವು ಕೂಡ ಕೊರೋನಾ ಪರೀಕ್ಷೆಗೆ ಒಳಪಡುವುದಾಗಿ ಹೇಳಿದರು.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು, ಅಲ್ಲಿಯವರೆಗೆ ಸ್ವ ಕ್ವಾರಂಟೈನ್ ಗೆ ಒಳಗಾಗುವುದು ಉತ್ತಮ. ಇತ್ತೀಚೆಗೆ ಕಾರ್ಯಕ್ರಮಗಳಲ್ಲಿ ಅವರ ಸಂಪರ್ಕಕ್ಕೆ ಬಂದವರು ಕೂಡ ಪ್ರತ್ಯೇಕವಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇತ್ತೀಚೆಗೆ ಮುಖ್ಯಮಂತ್ರಿಗಳು ರಾಜ್ಯಪಾಲ ವಜುಭಾಯಿ ವಾಲಾ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಅವರು ಸಹ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ಆದರೆ ಉತ್ತಮ ಎಂದು ಸಚಿವ ಸುಧಾಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com