ಮಹಾರಾಷ್ಟ್ರ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು,ಮಹಾರಾಷ್ಟ್ರದ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿಯ ಪರಿಶೀಲನೆ‌ ನಡೆಸಿದರು.

Published: 08th August 2020 05:59 PM  |   Last Updated: 08th August 2020 05:59 PM   |  A+A-


Ramesh_Jarkiholi1

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

Posted By : Nagaraja AB
Source : UNI

ಬೆಳಗಾವಿ: ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಹಾಗೂ ತುರ್ತು ಸಂದರ್ಭಗಳಲ್ಲಿ ನದಿತೀರದ ಗ್ರಾಮಗಳ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಇಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವ ರಾಜೇಶ್ ಟೋಪೆ ಅವರ ಜತೆ ಚರ್ಚೆ ನಡೆಸಿದರು.

ಮಹಾರಾಷ್ಟ್ರದ ಸಚಿವರೊಂದಿಗೆ ಅತಿವೃಷ್ಟಿ ಭೀತಿಯ ಈಚಲಕರಂಜಿ ಬಳಿಯ ಪಂಚಗಂಗಾ ನದಿ ಸೇತುವೆ ಪರಿಶೀಲಿಸಿದ ರಮೇಶ್ ಜಾರಕಿಹೊಳಿ, ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾದರೆ ನೀರು ಬಿಡುಗಡೆ ಮಾಡುವ ಮುಂಚೆ ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡಬೇಕು ಎಂದು ಮಹಾರಾಷ್ಟ್ರ ಸಚಿವರಲ್ಲಿ ಮನವಿ ಮಾಡಿಕೊಂಡರು.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಉಭಯ ರಾಜ್ಯಗಳ ಸಚಿವರು ಮತ್ತು ನೀರಾವರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿರುವಂತೆ ನೀರು ಬಿಡುಗಡೆ ಕುರಿತು ನಿರಂತರವಾಗಿ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಇದೇ ವೇಳೆ ಹೇಳಿದರು. 

ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದರಲ್ಲದೇ ಬಹಳಷ್ಟು ಹಾನಿ ಉಂಟಾಗಿತ್ತು. ಆದ್ದರಿಂದ ಈ ಬಾರಿ ಕರ್ನಾಟಕ ಸರ್ಕಾರದ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿರುತ್ತದೆ. ಮಳೆಯ ಪ್ರಮಾಣ,ಜಲಾಶಯಗಳ ಮಟ್ಟ ಮತ್ತು ನೀರು ಬಿಡುಗಡೆಗೆ ಕುರಿತು ಎರಡೂ ರಾಜ್ಯಗಳು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು,ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಸಚಿವರ ಜತೆ ಚರ್ಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

 ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಜೊಳಿ ಅವರು ಚಿಕ್ಕೋಡಿ ತಾಲ್ಲೂಕಿನ ಮಾಂಜ್ರ ಸೇತುವೆ ಬಳಿ ಕೃಷ್ಣಾ ನದಿ ನೀರಿನ ಹರಿವು ಪರಿಶೀಲಿಸಿದರು.ನಂತರ ಅಂಕಲಿ, ಯಡೂರ ಗ್ರಾಮದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು. 

ಇದೇ ವೇಳೆ ಎನ್ ಡಿಆರ್ ಎಫ್ ತಂಡದ ಜತೆ ಬೋಟ್ ನಲ್ಲಿ ಸಂಚರಿಸಿ ತುರ್ತು ಪರಿಸ್ಥಿತಿ ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಖುದ್ದಾಗಿ ಮಾಹಿತಿಯನ್ನು ಪಡೆದುಕೊಂಡರು. ಕಲ್ಲೋಳ-ಯಡೂರ ಬ್ಯಾರೇಜ್, ಶಮನೇವಾಡಿ ಸೇತುವೆ ಸೇರಿದಂತೆ ವಿವಿಧ ಕಡೆ ಸಚಿವರು ಭೇಟಿ ನೀಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ. ಆದ್ದರಿಂದ ನದಿತೀರದ ಗ್ರಾಮಸ್ಥರು ಆತಂಕಪಡಬೇಕಿಲ್ಲ.ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಜಿಲ್ಲೆಯ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದ ಜತೆ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಚಿವರು ಹೇಳಿದರು.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp