ಕಾನೂನಿನ ಎಬಿಸಿಡಿ ತಿಳಿಯದವರು ಇನ್ನೂ ಅಧಿಕಾರಿಯಾಗಿರುವುದು ಹೇಗೆ? ಮಾಲಿನ್ಯ ನಿಯಂತ್ರಣ ಮಂಡಳಿಗೆ 'ಹೈ' ಛೀಮಾರಿ

ಪರಿಸರ ಕಾನೂನಿನ ಎಬಿಸಿಡಿ ತಿಳಿಯದ ಅಧಿಕಾರಿ ಇನ್ನೂ ಪರಿಸರ ಇಲಾಖೆ ಅಧಿಕಾರಿ ಆಗಿರುವುದು ಹೇಗೆ? ಮಾಲಿನ್ಯ ನಿಯಂತ್ರಣ ಮಂಡಳಿ ತಮ್ಮ ಜವಾಬ್ದಾರಿಯನ್ನು ಬೇರೆ ಏಜೆನ್ಸಿಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದು ಹೇಗೆ? ಪೊಲೀಸರು ಅಸಹಾಯಕರಾಗಿದ್ದಾರೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪರಿಸರ ಕಾನೂನಿನ ಎಬಿಸಿಡಿ ತಿಳಿಯದ ಅಧಿಕಾರಿ ಇನ್ನೂ ಪರಿಸರ ಇಲಾಖೆ ಅಧಿಕಾರಿ ಆಗಿರುವುದು ಹೇಗೆ? ಮಾಲಿನ್ಯ ನಿಯಂತ್ರಣ ಮಂಡಳಿ ತಮ್ಮ ಜವಾಬ್ದಾರಿಯನ್ನು ಬೇರೆ ಏಜೆನ್ಸಿಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದು ಹೇಗೆ? ಪೊಲೀಸರು ಅಸಹಾಯಕರಾಗಿದ್ದಾರೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರಾರ್ಥನಾ ಮಂದಿರದಲ್ಲಿ ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಹೈಕೋರ್ಟ್‌ ತಪರಾಕಿ ಹಾಕಿದೆ.

ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಪರಿಸರ ಅಧಿಕಾರಿಯನ್ನು ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಪ್ರಾದೇಶಿಕ ಅಧಿಕಾರಿಯಾಗಿ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ತನ್ನ ಅಸಾಮರ್ಥ್ಯ ತೋರಿರುವುದನ್ನು ಹೈಕೋರ್ಟ್ ಗಮನಿಸಿದೆ, ಅಲ್ಲದೆ, ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಿದ್ದರೂ ಕ್ರಮ ಕೈಗೊಳ್ಳದೇ ಇರುವುದನ್ನು ಸಹಿಸಲಾಗದು. ಇನ್ನೊಂದು ವಾರದಲ್ಲಿ ಕ್ರಮ ಕೈಗೊಂಡು ಕೋರ್ಟ್‌ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಂಡಳಿಯ
ಅಧ್ಯಕ್ಷರಿಗೆ ಎಚ್ಚರಿಕೆ ನೀಡಿತು. 

ನಗರದ ಗೋವಿಂದರಾಜನಗರದಲ್ಲಿ ಧ್ವನಿವರ್ಧಕ ಬಳಸುತ್ತಿರುವುದನ್ನು ಆಕ್ಷೇಪಿಸಿ ವಕೀಲೆ ಸುಮಂಗಲಾ ಎ. ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸೋಮವಾರ ಬೆಳಗ್ಗೆ ಕೂಡ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ನ್ಯಾಯಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಳೆದ ಫೆ. 20ರಂದು ನೀಡಿದ್ದ ಆದೇಶ ಪಾಲಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿಲ್ಲ. ಕಡೇ ಪಕ್ಷ ಧ್ವನಿವರ್ಧಕಗಳ ಶಬ್ದ ಎಷ್ಟಿದೆ ಎಂಬ ಪರೀಕ್ಷೆಯನ್ನೂ ನಡೆಸಿಲ್ಲ. ಮಂಡಳಿಯ ಅಧಿಕಾರಿಗಳಿಗೆ ಕಾನೂನಿನ ಎ,ಬಿ,ಸಿ,ಡಿ ಗೊತ್ತಿರುವಂತೆ ಕಾಣುತ್ತಿಲ್ಲ. ಹಾಗಾಗಿ ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಕೋರ್ಟ್‌ ಈ ಹಿಂದಿನ ಆದೇಶದ ವೇಳೆ ನೀಡಿದ್ದ ನಿರ್ದೇಶನಗಳನ್ನು ಮಂಡಳಿ ಅಧಿಕಾರಿಗಳು ಪಾಲಿಸಿ, ಆ ಸಂಬಂಧ ಒಂದು ವಾರದೊಳಗೆ ವರದಿ ಸಲ್ಲಿಸಬೇಕು. ಇಲ್ಲವಾದರೆ ಆದೇಶ ಪಾಲಿಸದ ಮಂಡಳಿ ಅಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com