ಗ್ರಾಮ ಪಂಚಾಯ್ತಿ ಫಲಿತಾಂಶ: ಸಿಎಂ ಯಡಿಯೂರಪ್ಪ ತವರಲ್ಲಿ ಲಾಟರಿ ಮೂಲಕ ಬಿಜೆಪಿಗೆ ಒಲಿದ ಜಯ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮೇಗೌಡನಕೊಪ್ಪಲು ಗ್ರಾಮದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಮಂಜುಳಾಗೆ ಲಾಟರಿ ಹೊಡೆದಿದೆ.
Published: 30th December 2020 08:07 PM | Last Updated: 30th December 2020 08:07 PM | A+A A-

ಬಿಜೆಪಿ
ಬೂಕನಕೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮೇಗೌಡನಕೊಪ್ಪಲು ಗ್ರಾಮದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಮಂಜುಳಾಗೆ ಲಾಟರಿ ಹೊಡೆದಿದೆ.
ಇದೇ ರೀತಿ ರಾಜ್ಯದ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಂಜುಳಾ ಹಾಗೂ ಕಾಂಗ್ರೆಸ್‌ನ ವನಜಾಕ್ಷಿ ಅವರು ತಲಾ 301 ಮತಗಳನ್ನು ಸಮನಾಗಿ ಪಡೆದ ಕಾರಣ ಚುನಾವಣಾಧಿಕಾರಿಗಳು ಲಾಟರಿ ವಿಧಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಂಜುಳಾ ಅವರಿಗೆ ಅದೃಷ್ಠ ಒಲಿದು ಆಯ್ಕೆಯಾಗಿದ್ದಾರೆ.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾ.ಪಂ.ನ ಮತಗಟ್ಟೆ 2ರಲ್ಲಿ ಇಬ್ಬರು ಅಭ್ಯರ್ಥಿಗಳ ಸಮಬಲದ ಹೋರಾಟ ನಡೆಯಿತು. ಇಬ್ಬರೂ ತಲಾ 316 ಮತಗಳನ್ನು ಪಡೆದರು. ಸ್ಪರ್ಧಿಸಿದ್ದ ಸತೀಶ್ ಹಾಗೂ ತ್ಯಾಗರಾಜು ಅವರ ನಡುವೆ ತೀವ್ರ ಪೈಪೋಟಿ ನಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಲಾಟರಿ ಮೊರೆ ಹೋದ ವೇಳೆ ಸತೀಶ್‌ಗೆ ಜಯ ಒಲಿದಿದೆ.
ಮಂಡ್ಯ ತಾಲ್ಲೂಕು ಶಿವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುನ್ನಾಯ್ಕನಹಳ್ಳಿ ಗ್ರಾಮದ ರಾಜೇಶ್ ಅವರು ತಮ್ಮ ಪ್ರತಿಸ್ಪರ್ಧಿ ದಿವ್ಯಶ್ರೀ ವಿರುದ್ಧ ಕೇವಲ 1 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಹೊಸೂರು ಗ್ರಾಮದಿಂದ ಸ್ಪರ್ಧಿಸಿದ್ದ ಎಪಿಎಂಸಿ ನಿರ್ದೇಶಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮಣ್ಣ ಅವರು ತಾಲ್ಲೂಕು ಕುರುಬ ಸಮಾಜದ ಯುವ ಘಟಕದ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಿಂಗರಾಜು ಅವರನ್ನು ಕೇವಲ 1 ಮತದ ಅಂತರದಿಂದ ಪರಾಭವಗೊಳಿಸಿದ್ದಾರೆ.