ಆಶ್ರಮ, ವೃದ್ದಾಶ್ರಮ, ಸಿದ್ದಗಂಗಾ ಮಠಕ್ಕೆ ನೀಡುತ್ತಿದ್ದ ಅಕ್ಕಿ ಸ್ಥಗಿತಗೊಳಿಸಿದ ಬಿಜೆಪಿ ಸರ್ಕಾರ: ಯು.ಟಿ. ಖಾದರ್ ಆರೋಪ

ಆಶ್ರಮಗಳು, ವೃದ್ಧಾಶ್ರಮಗಳು, ಸಂಘ ಸಂಸ್ಥೆಗಳಿಗೆ ಅನ್ನ ದಾಸೋಹ ಕಾರ್ಯಕ್ರಮದಡಿ ನೀಡುತ್ತಿದ್ದ ಉಚಿತ ಅಕ್ಕಿಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದೆ ಎಂದು ಮಾಜಿ ಆಹಾರ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಶ್ರಮಗಳು, ವೃದ್ಧಾಶ್ರಮಗಳು, ಸಂಘ ಸಂಸ್ಥೆಗಳಿಗೆ ಅನ್ನ ದಾಸೋಹ ಕಾರ್ಯಕ್ರಮದಡಿ ನೀಡುತ್ತಿದ್ದ ಉಚಿತ ಅಕ್ಕಿಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದೆ ಎಂದು ಮಾಜಿ ಆಹಾರ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ, ಬಡವರ‌ ಯೋಜನೆಗಳನ್ನು ಸ್ಥಗಿತ‌ಗೊಳಿಸಿರುವುದು ಸಮರ್ಥನೀಯವಲ್ಲ. ಸರ್ಕಾರದ ಧೋರಣೆ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಧ್ವನಿಯೆತ್ತಲಿದೆ ಎಂದು ಹೇಳಿದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ತಾವು ಆಹಾರ ಸಚಿವರಾಗಿದ್ದಾಗ ಉಚಿತ ವಸತಿ, ಉಚಿತ ಆಹಾರ ನೀಡುವ ಸಂಘ ಸಂಸ್ಥೆಗಳಿಗೆ ವೃದ್ಧಾಶ್ರಮ, ಆಶ್ರಮಗಳ ಪ್ರತಿಯೊಬ್ಬರಿಗೆ ಹತ್ತು ಕೆ.ಜಿ.ಅಕ್ಕಿ, ಐದು ಕೆ.ಜಿ‌ಗೋದಿ ನೀಡಲಾಗುತ್ತಿತ್ತು. ಆರು ತಿಂಗಳಿಗೊಮ್ಮೆ ಆಹಾರ ದಾಸ್ತಾನು ಪೂರೈಸುವ ದಾಸೋಹ ಕಾರ್ಯಕ್ರಮ' ಜಾರಿಯಲ್ಲಿತ್ತು.  ಇದರಿಂದ ಇಂತಹ ಅಬಲರಿಗೆ ಯೋಜನೆಯಿಂದ ಪ್ರಯೋಜನವಾಗುತ್ತಿತ್ತು ಎಂದರು.

ಇದೀಗ ಮಾನವೀಯತೆ ಇಲ್ಲದೇ ಬಡವರ ಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸುತ್ತಿದೆ. ಬಡವರ ಪರ, ಸರ್ವರಿಗೂ ಸಮಾನ ಬಾಳು ನೀಡುವ ಉದ್ದೇಶ ಹೊಂದಿದ್ದರೆ ಬಿಜೆಪಿ ಸರ್ಕಾರ ಕಾರ್ಯಕ್ರಮಗಳನ್ನು ಮುಂದಿವರೆಸಬೇಕು. ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ಧೈರ್ಯವಿದ್ದರೆ ಶ್ರೀಮಂತರು, ಬಂಡವಾಳಷಾಹಿಗಳ ಪರವಾದ ಕಾರ್ಯಕ್ರಮಗಳನ್ನು ಬೇಕಾದರೆ ನಿಲ್ಲಿಸಲಿ. ಆದರೆ ಈ ರೀತಿ ಬಡವರ ಬದುಕಿಗೆ ಬರೆ ಹಾಕಬಾರದು ಎಂದರು‌.


ಈಗ ನೀಡುತ್ತಿರುವ ಏಳು ಕೆ.ಜಿ.ಪಡಿತರ ಅಕ್ಕಿ ಕಡಿತಗೊಳಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಬಡವರ ಹೊಟ್ಟೆ ತುಂಬುವ ಯೋಜನೆಗಳನ್ನು ದುರುದ್ದೇಶಪೂರಕವಾಗಿ ಬಿಜೆಪಿ ಸ್ಥಗಿತಗೊಳಿಸುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಏಳು ಕೆ.ಜಿ.ಅಕ್ಕಿಯನ್ನು ಹತ್ತು ಕೆ.ಜಿ.ಗೆ ಏರಿಸಬೇಕು ಎಂಬ ಬೇಡಿಕೆ ಇತ್ತು. ಕೇಂದ್ರ ಸರ್ಕಾರ ಅನುದಾನ ನೀಡದೇ ಇದ್ದರೆ ರಾಜ್ಯ ಸರ್ಕಾರವೇ ಅನುದಾನ ಕೊಟ್ಟು ಬಡವರ ಪರ ಯೋಜನೆಗಳನ್ನು ದಾಸೋಹ ಯೋಜನೆ ಮುಂದುವರೆಸಬೇಕು. ಕಲ್ಕಡ್ಕ ಪ್ರಭಾಕರ್ ಭಟ್ ಶಾಲೆಗೆ ಅಕ್ಕಿ ನಿಲ್ಲಿಸಿದ್ದಕ್ಕೆ ಕಿಡಿಕಾರಿದ್ದ ಬಿಜೆಪಿ ನಾಯಕರು, ವೃದ್ಧಾಶ್ರಮಗಳು ಉಚಿತ‌ ವಸತಿನಿಲಯಗಳಲ್ಲಿನ ಬಡವರ ಹೊಟ್ಟೆಯ ಮೇಲೆ‌ ಹೊಡೆದಿದ್ದು ಸರಿಯೇ ಎಂದು ತಿರುಗೇಟು ನೀಡಿದರು.

ಬೀದರ್ ಶಿಕ್ಷಣ ಸಂಸ್ಥೆಗಳ ಮೇಲಿನ ದೌರ್ಜನ್ಯ ಖಂಡನೀಯ. ತನಿಖೆಯಲ್ಲಿ ನಿಜಾಂಶ ಪತ್ತೆ ಮಾಡಿ ಸತ್ಯಾಂಶ ಇದ್ದರೆ ಪ್ರಕರಣ ದಾಖಲಿಸಬೇಕು. ಬೀದರ್ ಶಾಹೀನ್ ಪ್ರಕರಣದ ಬಗ್ಗೆ ಐಎಎಸ್ ಅಧಿಕಾರಿಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಪ್ರಕರಣ ದಾಖಲಿಸಬಾರದು‌. ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದನ್ನು ಮರೆಯಬಾರದು. ವರ್ಗಾವಣೆ ಮಾಡುತ್ತಾರೆ ಎಂಬ ಭಯ ಅಧಿಕಾರಿಗಳಿಗೆ ಬೇಡ ಎಂದು ಯು.ಟಿ.ಖಾದರ್ ಸಲಹೆ ನೀಡಿದರು. ಬಿಜೆಪಿ ವಿರೋಧಿಸಿದ್ದಕ್ಕೆ ತಮ್ಮ ಮೇಲೂ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ .ಮುಕ್ತವಾಗಿ ಮಾತನಾಡುವವರ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತಿದೆ. ಬಿಜೆಪಿಯ ನಾಯಕರು ದೇಶದ್ರೋಹಿ ಎಂದು ಬರೆದುಕೊಟ್ಟ ತಕ್ಷಣ ಪೊಲೀಸರು ದೇಶದ್ರೋಹದ ಆರೋಪ ದಾಖಲಿಸುತ್ತಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಆದಿತ್ಯರಾವ್  ಪ್ರಕರಣ ಮುಚ್ಚುಹಾಕುವ ಪ್ರಯತ್ನ ನಡೆಯುತ್ತಿದೆ. ಶಾಸಕರ ಭವನಕ್ಕೆ ಬಾಂಬ್  ಇಟ್ಟವರನ್ನು ಶಾಸಕರು ಪರಿಷತ್ ಸದಸ್ಯರನ್ನಾಗಿ ಬಿಜೆಪಿ ಬಡ್ತಿ ನೀಡುತ್ತಿದೆ. ಬಿಜೆಪಿ ಬಾಂಬ್ ಇಟ್ಟವರಿಗೆಲ್ಲ ಸ್ಥಾನಮಾನ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು. ಮಹಾತ್ಮಾಗಾಂಧೀಜಿ ಅವರ ಅಹಿಂಸಾ ತತ್ವ, ಸ್ವಾಮಿ ವಿವೇಕಾನಂದರ ಸಹೋದರತ್ವದ ಬಗ್ಗೆ ವಿಶ್ವದಲ್ಲಿ ಮಾನ್ಯತೆ ಇದೆ. ಇಡೀ ವಿಶ್ವವೇ  ಗಾಂಧೀಜಿ ಅವರನ್ನು ಇಂದಿಗೂ ಸ್ಮರಿಸುತ್ತಿದೆ. ಆದರೆ ಹೆಗಡೆ ಮಾತ್ರ ಗಾಂಧೀಜಿಗೆ ಅವಮಾನ ಮಾಡುತ್ತಿದ್ದಾರೆ. ಇನ್ನೊಬ್ಬರ ಮುಖಕ್ಕೆ ಉಗಿಯುವ ಅನಂತ್ ಕುಮಾರ್ ಅವರ ಉಗುಳು ಅವರ ಮೇಲೆಯೇ ಬೀರುತ್ತದೆ ಎನ್ನುವುದನ್ನು ಅನಂತ್ ಕುಮಾರ್ ಹೆಗಡೆ ಮರೆಯಬಾರದು. ಅನಂತ್ ಕುಮಾರ್ ಅಂತಹ ದ್ವೇಷಪೂರಿತ ವ್ಯಕ್ತಿಗಳು, ಗಾಂಧೀಜಿಯನ್ನು ಕೊಲ್ಲುವ ಅಣಕುಪ್ರದರ್ಶನ ಮಾಡುವವರ ಮೇಲೆ‌ ಬಿಜೆಪಿ ಏಕೆ‌ ದೇಶದ್ರೋಹದ ಆರೋಪ ದಾಖಲಿಸುತ್ತಿಲ್ಲ. ಬಿಜೆಪಿ ನಾಯಕತ್ವ ಗಾಂಧೀಜಿ ಹಾಗೂ ಅನಂತ್ ಕುಮಾರ್ ಹೆಗಡೆ ಬಗ್ಗೆ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು‌.

ಸಿಎಎ ಎನ್‌ಆರ್‌ಸಿ ಬಗ್ಗೆ ರಾಜ್ಯದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದರು ಸಹ ಮುಖ್ಯಮಂತ್ರಿ ಯಡಿಯೂರಪ್ಪ ಆಗಲೀ, ಗೃಹಸಚಿವರಾಗಲೀ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಗೊಂದಲಗಳಿದ್ದು, ಮೊದಲು ಅದನ್ನು ನಿವಾರಿಸಬೇಕು ಎಂದರು. ಜಾತಿ ಧರ್ಮದ ಹೆಸರಿನಲ್ಲಿ ವ್ಯಾಪಾರಿಗಳು, ಕಷ್ಟಪಟ್ಟು ದುಡಿಯುವವರನ್ನು ಕಷ್ಟಕ್ಕೆ ಸಿಲುಕಿಸುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿದೆ. ಇಂತಹ ಸಣ್ಣತನವನ್ನು ನಿಲ್ಲಿಸಬೇಕು ಎಂದು ಯು.ಟಿ‌.ಖಾದರ್ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com