ಮೂರು ದಶಕಗಳಿಂದ ಗಡ್ಡ, ಕೂದಲು ತೆಗೆಯದೆ ಅಯೋಧ್ಯೆ ತೀರ್ಪಿಗೆ ಕಾದ ಬೆಂಗಳೂರು ಕ್ಷೌರಿಕ!

ಯಾವ್ಯಾವುದೋ ವಿಷಯಕ್ಕೆ ಶಪಥ, ಪ್ರತಿಜ್ಞೆ ಮಾಡುವವರನ್ನು ನಾವು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಈ ವ್ಯಕ್ತಿ ಕೂಡ ಹಾಗೆಯೇ. ಇವರ ಶಪಥ ವಿಶೇಷವಾಗಿದೆ. 
ತಮ್ಮ ಕ್ಷೌರದ ಅಂಗಡಿ ಮುಂದೆ ಅಧಿನಾರಾಯಣ
ತಮ್ಮ ಕ್ಷೌರದ ಅಂಗಡಿ ಮುಂದೆ ಅಧಿನಾರಾಯಣ

ಬೆಂಗಳೂರು: ಯಾವ್ಯಾವುದೋ ವಿಷಯಕ್ಕೆ ಶಪಥ, ಪ್ರತಿಜ್ಞೆ ಮಾಡುವವರನ್ನು ನಾವು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಈ ವ್ಯಕ್ತಿ ಕೂಡ ಹಾಗೆಯೇ. ಇವರ ಶಪಥ ವಿಶೇಷವಾಗಿದೆ. 


ಅಯೋಧ್ಯೆ, ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಭಾರತೀಯರಿಗೆ ಭಾವನಾತ್ಮಕ ವಿಷಯ. ಇಷ್ಟು ದಶಕಗಳಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅದೆಷ್ಟೋ ಘಟನೆಗಳು ನಡೆದಿರಬಹುದು. ಇಲ್ಲೊಬ್ಬರು ರಾಮ ಜನ್ಮಭೂಮಿ ವಿವಾದ ಬಗೆಹರಿಯದೆ ನಾನು ಗಡ್ಡ-ತಲೆಕೂದಲು ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದರು.ಅವರು ವೃತ್ತಿಯಲ್ಲಿ ಕ್ಷೌರಿಕ ಎನ್ನುವುದು ವಿಶೇಷ. ಪ್ರತಿನಿತ್ಯ ಹತ್ತಾರು ಮಂದಿಯ ಕೂದಲು, ಗಡ್ಡ ತೆಗೆಯುವ ಇವರು ತಾವು ಮಾತ್ರ ಬರೋಬ್ಬರಿ 27 ವರ್ಷಗಳ ಕಾಲ ಗಡ್ಡ, ಕೂದಲಿಗೆ ಕತ್ತರಿ, ಬ್ಲೇಡುಗಳನ್ನೇ ಹಾಕಿರಲಿಲ್ಲ.


ಇವರ ಹೆಸರು ಅಧಿನಾರಾಯಣ, ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರು. 46 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ರಾಜಾಜಿನಗರದಲ್ಲಿ ನೆಲೆಸಿದರು.ಆಂಧ್ರ ಪ್ರದೇಶದಲ್ಲಿ ಕ್ಷೌರ ಕೆಲಸವನ್ನು ಕಲಿತುಕೊಂಡು ಬಂದು ಇಲ್ಲಿ ಅದೇ ವೃತ್ತಿಯನ್ನು ಮುಂದುವರಿಸಿದರು.


ಅಧಿನಾರಾಯಣ ಶ್ರೀರಾಮನ ಪರಮ ಭಕ್ತರು. ಅಯೋಧ್ಯೆಗೆ ಆಗಾಗ ಹೋಗುತ್ತಿದ್ದರು. ಇಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆಗೆ 1992ರಲ್ಲಿ ಅಯೋಧ್ಯೆಗೆ ಹೋಗಿದ್ದರಂತೆ. ಅಂದು ಕರ್ನಾಟಕದಿಂದ ಅಯೋಧ್ಯೆಗೆ ಒಂದು ತಂಡವೇ ಹೋಗಿತ್ತು. ಇಲ್ಲಿ ಕ್ಷೌರದ ಅಂಗಡಿಗೆ ಬಾಗಿಲು ಹಾಕಿ ಅಧಿನಾರಾಯಣ ತಂಡದವರ ಜೊತೆ ಅಯೋಧ್ಯೆಗೆ ಹೋಗಿ ಅಲ್ಲಿ 15 ದಿನಗಳ ಕಾಲ ಇದ್ದರಂತೆ.
ರಾಮಮಂದಿರ ವಿವಾದ ಬಗೆಹರಿಯುವವರೆಗೆ ಕೂದಲು, ಗಡ್ಡ ತೆಗೆಯುವುದಿಲ್ಲ ಎಂದು ಆ ಸಮಯದಲ್ಲಿ ಪ್ರತಿಜ್ಞೆಗೈದಿದ್ದರಂತೆ. ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ಗಡ್ಡ, ಕೂದಲು ಬಿಟ್ಟ ಅಧಿನಾರಾಯಣ ಅವರು ನಂತರ ಅದನ್ನು ತೆಗೆದಿದ್ದು ಕಳೆದ ವರ್ಷ ನವೆಂಬರ್ ನಲ್ಲಿ ಅಯೋಧ್ಯೆ ತೀರ್ಪು ಹೊರಬಂದ ಮೇಲೆಯೇ!

ಇವರ ಈ ಶಪಥ ಮನೆಯವರಿಗೆ ಕಿರಿಕಿರಿ ತಂದಿದ್ದೂ ಉಂಟಂತೆ. ಮಡದಿ-ಮಕ್ಕಳು ಮನವೊಲಿಸಲು ನೋಡಿ ವಿಫಲವೂ ಆದರು. ಕೊನೆಗೆ ಅಧಿನಾರಾಯಣ ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟಿದ್ದರು. ಇವರ ಮೂವರು ಮಕ್ಕಳಲ್ಲಿ ಒಬ್ಬರು ಇವರ ಕಾಯಕದಲ್ಲಿ ಕೈಜೋಡಿಸಿದ್ದಾರೆ. 


ಮೂಲತಃ ಆರ್ ಎಸ್ಎಸ್ ಕಾರ್ಯಕರ್ತರಾಗಿರುವ ಅಧಿನಾರಾಯಣ ಅವರ ಹೆಗಲಿನಲ್ಲಿ ಕೇಸರಿ ಶಾಲು ಮತ್ತು ತಿಲಕ ಯಾವತ್ತೂ ತಪ್ಪುವುದಿಲ್ಲ. ಸಣ್ಣ ಅಂಗಡಿಯಿಂದ ಆರಂಭವಾದ ಇವರ ಕ್ಷೌರದ ಅಂಗಡಿ ಇಂದು ರಾಜಾಜಿನಗರದಲ್ಲಿ ಆರ್ ಎಸ್ಎಸ್ ಹೇರ್ ಸ್ಟೈಲ್ ಎಂದು ಫೇಮಸ್ಸು ಆಗಿದೆ. 


ರಾಮಮಂದಿರ ನಿರ್ಮಾಣ ಪರವಾಗಿ ತೀರ್ಪು ಬಂದಿದೆ. ಇದೀಗ ರಾಮ ಮಂದಿರ ನಿರ್ಮಾಣವಾಗುವವರೆಗೆ ಕೂದಲು, ಗಡ್ಡ ತೆಗೆಯುವುದಿಲ್ಲ ಎಂದು ಅಧಿನಾರಾಯಣ ಮತ್ತೆ ಶಪಥ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ಹೋಗಿ ಅಲ್ಲಿ ಕೂದಲು ತೆಗೆಯುತ್ತೇನೆ ಎಂದು ಹೇಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com