ಪತ್ರಕರ್ತರ ಸಹಕಾರ ಸಂಘದ ಬಲವರ್ಧನೆಗೆ ಸರ್ಕಾರ ಬದ್ಧ: ಡಾ. ಅಶ್ವತ್ಥನಾರಾಯಣ

ಪತ್ರಕರ್ತರ ಸಹಕಾರ ಸಂಘ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ವೃತ್ತಿ ಜೀವನಕ್ಕೆ ಪೂರಕವಾಗಿದೆ. ಇಂಥ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಬೇಕು ಈ ನಿಟ್ಟಿನಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ನೆರವು ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಮಾಧ್ಯಮ ಟ್ವಂಟಿ-20 ಸ್ಮರಣ ಸಂಚಿಕೆ
ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಮಾಧ್ಯಮ ಟ್ವಂಟಿ-20 ಸ್ಮರಣ ಸಂಚಿಕೆ

ಬೆಂಗಳೂರು: ಪತ್ರಕರ್ತರ ಸಹಕಾರ ಸಂಘ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ವೃತ್ತಿ ಜೀವನಕ್ಕೆ ಪೂರಕವಾಗಿದೆ. ಇಂಥ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಬೇಕು ಈ ನಿಟ್ಟಿನಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ನೆರವು ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.


ಪತ್ರಕರ್ತರ ಸಂಘದ 70ನೇ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಅಶ್ವತ್ಥನಾರಾಯಣ ಮಾತನಾಡಿದರು.


ಸಹಕಾರ ಸಂಘಗಳ ಆಶ್ರಯದಲ್ಲಿ ಅದರ ಸದಸ್ಯರು ಬದುಕು ಕಟ್ಟಿಕೊಳ್ಳಬೇಕು. ವೃತ್ತಿ ಜೀವನಕ್ಕೆ ಪೂರಕವಾಗುವುದೇ ಇಂಥ ಸಂಘಗಳ ಉದ್ದೇಶವಾಗಬೇಕು. ಪತ್ರಕರ್ತರ ಸಂಘ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿ ಇಷ್ಟು ವರ್ಷ ಉಳಿದಿರುವುದು ಬಹಳ ಸಂತೋಷದ ವಿಚಾರ. ಸಂಘದ ಸದಸ್ಯರಿಗೆ ತುರ್ತುಸಾಲ, ವೈಯಕ್ತಿಕ ಸಾಲ ಒದಗಿಸುವ ಮೂಲಕ ಸ್ವಾಭಿಮಾನದ ಬದುಕಿಗೆ ನೆರವಾಗುತ್ತಿದೆ. ಇಂಥ ಸಹಕಾರ ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ ಎಂದರು.


ಸಮಾಜಕ್ಕೆ ಆತ್ಮೀಯವಾಗಿರುವ ಮಾಧ್ಯಮಗಳಿಗೆ ಶಕ್ತಿ ತುಂಬದಿದ್ದರೆ ಕಷ್ಟವಾಗುತ್ತದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ತರಲು ಮಾಧ್ಯಮದಿಂದಲೇ ಸಾಧ್ಯ. ಜವಾಬ್ದಾರಿ ಅರಿತು ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಸಮಾಜದ ರಕ್ಷಣೆ ಸಾಧ್ಯ. ಸೃಜನಶೀಲತೆ ಹಾಗೂ ಉತ್ತಮ ಚಿಂತನಾ ಕ್ರಮದ ಜತೆಗೆ ನಿಷ್ಪಕ್ಷಪಾತ ನಿಲುವು ಇದ್ದಾಗ ಒಳ್ಳೆಯ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.


ಡಿಜಿಟಲ್‌ ಮಾಧ್ಯಮದ ಪಾತ್ರ ದೊಡ್ಡದು
ಡಿಜಿಟಲ್‌ ಮೀಡಿಯಾ ಈಗ ಎಲ್ಲರಿಗೂ ಮುಕ್ತವಾಗಿದ್ದು, ದೊಡ್ಡ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಶಕ್ತಿ ತುಂಬುತ್ತಿದೆ. ಈ ದಾರಿಯಲ್ಲಿ ಜಗತ್ತು ವೇಗವಾಗಿ ಸಾಗುತ್ತಿದ್ದು, ನಾವು ಸಹ ಇದನ್ನು ಅಳವಡಿಸಿಕೊಳ್ಳಬೇಕು. ಡಿಜಿಟಲ್‌ ಮಾಧ್ಯಮಗಳಲ್ಲಿ ಅನುಕೂಲದ ಜತೆಗೆ ಅನನಕೂಲವೂ ಇದ್ದು, ಎಚ್ಚರಿಕೆಯಿಂದ ನಿಭಾಯಿಸಬೇಕು. ನಿರಾಧಾರವಾಗಿ ಬರೆದರೆ ಮಾತ್ರ ಸಮಸ್ಯೆ ಆಗುವುದು. ಮುಂದಿನ ದಿನದಲ್ಲಿ ಸೈಬರ್‌ ಕಾನೂನಿನಲ್ಲಿ ಸಾಕಷ್ಟು ಸುಧಾರಣೆ ಆಗಲಿದ್ದು, ಆನ್‌ಲೈನ್‌ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ ಎಂದು ಕೂಡ ಹೇಳಿದರು. 


ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್‌ ರಾಜೇಂದ್ರಕುಮಾರ್‌, ಸ್ಮರಣ ಸಂಚಿಕೆ ಸಂಪಾದಕ ರಘುನಾಥ ಚ.ಹ, ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com