ಯರಮರಸ್ ವಿದ್ಯುತ್ ಯೋಜನೆ ವಿಳಂಬದಿಂದ ಸರ್ಕಾರಕ್ಕೆ 2,517 ಕೋಟಿ ರೂ. ಹೆಚ್ಚುವರಿ ವೆಚ್ಚ; ಸಿಎಜಿ ವರದಿ

ರಾಯಚೂರಿನ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರದ ಕಾರ್ಯಾರಂಭ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ 2014ರಿಂದ 2018ರ ಅವಧಿಯಲ್ಲಿ 11,079 ಕೋಟಿ ರೂ. ಮೌಲ್ಯದ 23, 188 ದಶಲಕ್ಷ ಯೂನಿಟ್ ವಿದ್ಯುತ್ ಅನ್ನು ಖಾಸಗಿ ಉತ್ಪಾದಕರಿಂದ ಖರೀದಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಯಚೂರಿನ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರದ ಕಾರ್ಯಾರಂಭ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ 2014ರಿಂದ 2018ರ ಅವಧಿಯಲ್ಲಿ 11,079 ಕೋಟಿ ರೂ. ಮೌಲ್ಯದ 23, 188 ದಶಲಕ್ಷ ಯೂನಿಟ್ ವಿದ್ಯುತ್ ಅನ್ನು ಖಾಸಗಿ ಉತ್ಪಾದಕರಿಂದ ಖರೀದಿಸಿದೆ.

ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಸಾರ್ವಜನಿಕ ಉದ್ಯಮಗಳ ಮೇಲಿನ ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿಯಲ್ಲಿ, ಯರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರದ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿದ್ದಲ್ಲಿ, ವಿದ್ಯುತ್ ಖರೀದಿಯ 2,517 ಕೋಟಿ ರೂ. ಹೆಚ್ಚುವರಿ ವೆಚ್ಚವನ್ನು ತಪ್ಪಿಸಬಹುದಿತ್ತು ಎಂದು ಉಲ್ಲೇಖಿಸಲಾಗಿದೆ.

ಸ್ಥಾವರ ಆರಂಭ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮವು 2008ರ ಜೂನ್‌ನಲ್ಲಿ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್ ಇಲ್) ಜತೆಗೆ ಒಪ್ಪಂದ ಮಾಡಿಕೊಂಡಿತು. ಈ ಯೋಜನೆಯನ್ನು 2014ರ ಅಕ್ಟೋಬರ್‌ ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಯೋಜನೆ ಕಾರ್ಯಾಚರಣೆಗೆ ಸಿದ್ಧವಾಗಿದ್ದು 2017ರ ಏಪ್ರಿಲ್ ನಲ್ಲಿ. ಇದರಿಂದ ಯೋಜನಾ ವೆಚ್ಚದ ಜೊತೆಗೆ, ವಿದ್ಯುತ್‌ ಉತ್ಪಾದನಾ ಶುಲ್ಕ ಸಹ ಯುನಿಟ್‌ ಒಂದಕ್ಕೆ 3.24 ರೂ.ಗಳಿಂದ ತಾತ್ಕಾಲಿಕವಾಗಿ 5.36ರೂ.ಗಳಿಗೆ ಹೆಚ್ಚಳವಾಯಿತು ಎಂದು ವರದಿ ತಿಳಿಸಿದೆ. 

ಈ ಹಿಂದೆಯೂ ಕರ್ನಾಟಕ ವಿದ್ಯುತ್‌ ನಿಗಮವು ಹಲವು  ಯೋಜನೆಗಳನ್ನು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ಗೆ ವಹಿಸಿತ್ತು. ಆದರೆ,  ಸಂಸ್ಥೆಯು ಯೋಜನೆಗಳ ಅನುಷ್ಠಾನದ ವೇಳೆಗೆ ಹಲವು ತೊಂದರೆಗಳನ್ನು ಎದುರಿಸಿತ್ತು. ಈ  ಅಂಶಗಳನ್ನು ಗಮನಿಸಿದೆಯೇ ನಿಗಮವು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಬದಲು  ಖಾಸಗಿ ಸಹಭಾಗಿತ್ವದ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು ಎಂದು ಸಲಹೆ ನೀಡಲಾಗಿದೆ.

ಯೋಜನೆ ಬರೋಬ್ಬರಿ 17 ತಿಂಗಳು ತಡವಾಗಲು ಅದರ ವಿನ್ಯಾಸ ರಚನೆಯಲ್ಲಿ ಪದೇ ಪದೆ ಬದಲಾವಣೆ  ಮಾಡಿದ್ದು, ಮಣ್ಣನ್ನು ಪುನರ್‌ ಪರೀಕ್ಷೆ ಮಾಡಿದ್ದೇ ಕಾರಣ. ಇದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ಇದರಿಂದಾಗಿ, ಕಲ್ಲಿದ್ದಲು ಸಾಗಣೆಗೆ ರೈಲ್ವೆ ಉಪ ಮಾರ್ಗ ಹಾಗೂ ವ್ಯಾಗನ್ನುಗಳ ನಿಲುಗಡೆ ವ್ಯವಸ್ಥೆ, ಪ್ರಾಂಗಣ ಕಾಮಗಾರಿ  ತಡವಾಯಿತು ಎಂಬ ವಿಷಯ ವರದಿಯಲ್ಲಿ ಬಹಿರಂಗಗೊಂಡಿದೆ. 

ಶೀತಲ ಗೋಪುರದ ಮಾದರಿಗೆ ಅಂತಿಮ ರೂಪ ನೀಡಲು ಹಾಗೂ ವಿನ್ಯಾಸಗಳಿಗೆ ಅನುಮೋದನೆ ನೀಡುವ ವೇಳೆ ವಿಳಂಬ ಮಾಡಿದ್ದರಿಂದ ಕೊಳವೆ ಮಾರ್ಗದ ಕಾಮಗಾರಿಗೆ 29.75 ಕೋಟಿ ರೂ. ಹೆಚ್ಚುವರಿ ಪಾವತಿ ಮಾಡಲಾಗಿದೆ. ಅಲ್ಲದೆ, ಮೆಗಾ ವಿದ್ಯುತ್‌ ಯೋಜನೆಯ ಅಡಿಯಲ್ಲಿ ಸುಮಾರು 335 ಕೋಟಿ ರೂ. ಗಳಷ್ಟು ವಿನಾಯಿತಿ ಪಡೆಯಲು ಅವಕಾಶವಿದ್ದರೂ, ಸರ್ಕಾರ ಆ ಪ್ರಯತ್ನ ನಡೆಸಿಲ್ಲ ಎಂದು ವರದಿ ತಿಳಿಸಿದೆ. 

ಯೋಜನೆಯ ಆರಂಭದಲ್ಲಿದ್ದ 8,806 ಕೋಟಿ ರೂ. ಯೋಜನಾ ವೆಚ್ವನ್ನು  12,915 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. 2014ರಿಂದ 2018ರ ಅವಧಿಯಲ್ಲಿ ರಾಜ್ಯ ಸರ್ಕಾರ 11,079 ಕೋಟಿ ರೂ. ಮೌಲ್ಯದ 1,600 ಮೆಗಾವಾಟ್ ವಿದ್ಯುತ್ ಖರೀದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com