ಚಿಕ್ಕಬಳ್ಳಾಪುರದಲ್ಲಿ ಜೋಡಿ ರಥೋತ್ಸವ, ಹರಿದು ಬಂದ ಜನಸಾಗರ

ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಹಸ್ರಾರು ಸಂಖ್ಯೆಯ ಭಕ್ತರ ಶ್ರದ್ಧಾಭಕ್ತಿಯ ಹರ್ಷೋದ್ಗಾರಗಳ ಮಧ್ಯೆ ಜೋಡಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜೋಡಿ ರಥೋತ್ಸವ
ಜೋಡಿ ರಥೋತ್ಸವ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಹಸ್ರಾರು ಸಂಖ್ಯೆಯ ಭಕ್ತರ ಶ್ರದ್ಧಾಭಕ್ತಿಯ ಹರ್ಷೋದ್ಗಾರಗಳ ಮಧ್ಯೆ ಜೋಡಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೊಡ್ಡ ರಥದಲ್ಲಿ ಭೋಗನಂದೀಶ್ವರಸ್ವಾಮಿ ಮತ್ತು ಗಿರಿಜಾಂಬ ಹಾಗೂ ಚಿಕ್ಕರಥದಲ್ಲಿ ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಹೂವುಗಳಿಂದ ಶೃಂಗಾರಗೊಂಡ ರಥಗಳನ್ನು ಭಕ್ತರು ದೇವಸ್ಥಾನದ ಸುತ್ತ ಎಳೆದರು. ಈ ವೇಳೆ ಜಾತ್ರೆಯಲ್ಲಿದ್ದ ಭಕ್ತರು ರಥಗಳ ಮೇಲೆ ಬಾಳೆ ಹಣ್ಣು ತೂರಿ ಧನ್ಯತಾ ಭಾವ ಮೆರೆದರು.

ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರದಿಂದಲೇ ದೇವಸ್ಥಾನದಲ್ಲಿ ದಿನವೀಡಿ ವಿಶೇಷ ಅಭಿಷೇಕ ಮತ್ತು ಹವನ ಹೋಮ, ಹಂಸ ವಾಹನೋತ್ಸವ, ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕ, ಕಾಶಿಯಾತ್ರೆ, ಹರಿಕಥೆ, ಭಜನೆ, ಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.

ಶನಿವಾರ ಬೆಳಗಿನ ಜಾವ ಮೂರು ಮತ್ತು ನಾಲ್ಕನೆ ಯಾಮದ ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭೀಷೇಕಗಳನ್ನು ನೇರವೇರಿಸಲಾಯಿತು. ಶಿವರಾತ್ರಿ ಉಪವಾಸ ನಿರತ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.

ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದಿಂದ ಕೂಡ ನಂದಿ ಜಾತ್ರೆಗೆ ಭಕ್ತರ ದಂಡೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿ ಕೊಟ್ಟು, ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಜಾತ್ರೆಗೆ ಬಂದವರ ಹಸಿವು, ದಣಿವು ದೂರ ಮಾಡಲು ಅನೇಕ ಕಡೆಗಳಲ್ಲಿ ಭಕ್ತರು ವಾಹನಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಉಪಾಹಾರ ವಿತರಣೆ ಮಾಡುತ್ತಿದ್ದ ದೃಶ್ಯಗಳು ಗೋಚರಿಸಿದವು.

ಭರ್ಜರಿ ವ್ಯಾಪಾರ: ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನಿಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು.

ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್ಕ್ರಿಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು. 

ಭರಪೂರ ಮನರಂಜನೆ: ಜಾತ್ರೆಯ ಪರಿಸರದಲ್ಲಿಯೇ ತಲೆ ಎತ್ತಿದ್ದ ಮನರಂಜನಾ ತಾಣ ಬಹುತೇಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅಲ್ಲಿ ಅಬಾಲವೃದ್ಧರಾದಿಯಾಗಿ ಜಾತ್ರೆಗೆ ಬಂದವರು ಜಾಯಿಂಟ್ ವ್ಹೀಲ್, ರೈಲು ಸವಾರಿ, ತೊಟ್ಟಿಲು, ಜಾರುಬಂಡೆ ಸೇರಿದಂತೆ ವಿವಿಧ ಮನರಂಜನಾ ಆಟಗಳಲ್ಲಿ ಮೈಮರೆತು, ಕೇಕೆ ಹಾಕುತ್ತಿದ್ದ ದೃಶ್ಯಗಳು ಗೋಚರಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com