ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪ್ರತೀಕ: ಬೆಂಗಳೂರಿನಲ್ಲಿ ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ ಎಂದು ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹಾಡಿ ಹೊಗಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ ಎಂದು ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹಾಡಿ ಹೊಗಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ಮೋದಿ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದರು.

ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ವಾರಣಾಸಿಯಲ್ಲಿ ಪವಿತ್ರ ಗಂಗಾ ಸ್ನಾನಮಾಡಿ, ಗಂಗಾ ಆರತಿಯಲ್ಲಿ ಭಾಗಿಯಾಗಿದ್ದನ್ನು ಅಮಿತ್ ಶಾ ಉಲ್ಲೇಖಿಸಿದರು.

ಶಂಕರಾಚಾರ್ಯರು ಅದ್ವೈತ ಮಾರ್ಗದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಹೇಳಿದ್ದರು. ಭಕ್ತಿ, ಕರ್ಮ, ಜ್ಞಾನದ ಬಗ್ಗೆ ಅವರು ನಂಬಿಕೆ ಇಟ್ಟಿದ್ದರು. ಯಾವುದೇ ಮಾರ್ಗದಿಂದಲೂ ಜೀವನ ಕಲ್ಯಾಣವಾಗಬಹುದು ಎಂದು ಅವರು ನಂಬಿದ್ದರು ಎಂದು ಅಮಿತ್ ಶಾ ಹೇಳಿದರು.

ಇದೇ ವೇಳೆ ಧಾರ್ಮಿಕ ಸಂಸ್ಕಾರ ದೊರೆತರೆ ಭವಿಷ್ಯದಲ್ಲಿ ಮಕ್ಕಳು ಹಾದಿ ತಪ್ಪುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು.

ಸಂಸ್ಕಾರ, ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಇವುಗಳು ಬದುಕಿಗೆ ಆಧಾರ ಸ್ಥಂಭವಾಗಿವೆ. ದೇಶದ ಹೆಗ್ಗುರುತುಗಳಾಗಿರುವ ವೇದ ಉಪನಿಷತ್ತುಗಳ ಸಾಂಸ್ಕೃತಿಕ ಜ್ಞಾನವನ್ನು ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಧಾರೆ ಎರೆಯುವುದು ಅತ್ಯಗತ್ಯವಾಗಿದ್ದು, ಮಕ್ಕಳಿಗೆ ಅವರ ಪಠ್ಯ ವಿಷಯಗಳೊಂದಿಗೆ ದೇಶದ ಸಂಸ್ಕೃತಿ, ಇತಿಹಾಸ, ಪುರಾಣಗಳ ಬಗ್ಗೆ ಆಸಕ್ತಿ ಮೂಡಿಸುವ ಬಗ್ಗೆ ಪೋಷಕರು ಆಸಕ್ತಿ ತೋರಬೇಕು ಎಂದರು. 

ಸಂಸ್ಕೃತಿ, ಇತಿಹಾಸಗಳ ಅಧ್ಯಯನ ಮಕ್ಕಳಲ್ಲಿ ಶಿಸ್ತು ಮೂಡಿಸಲು ಸಹಕಾರಿ. ತಮ್ಮ ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಆದಿ ಶಂಕರಾಚಾರ್ಯರ ಜೀವನ ಅತ್ಯುತ್ತಮ ಉದಾಹರಣೆಯಾಗಿದೆ. ಮಕ್ಕಳಿಗೆ ಅವರು ಸ್ಫೂರ್ತಿಯ ಸೆಲೆಯಾಗಿ, ಭಾರತದಲ್ಲಿ ಆಗಿಹೋಗಿರುವ ಮಹಾಪುರುಷರ ಜೀವನ ಕತೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ ಎಂದರು. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ೫೦೦ ಪ್ರೌಢಶಾಲೆಗಳ ೨ ಲಕ್ಷಕ್ಕೂ ಹೆಚ್ಚು ಮಕ್ಕಳು ವಿವೇಕದೀಪಿನೀ ಕಲಿಯುತ್ತಿದ್ದಾರೆ, ಇದರಿಂದ ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತಿದೆ ಎನ್ನುವ ವ್ಯಾಪಕ ಅಭಿಪ್ರಾಯದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇದರ ಬೋಧನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು. 

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಮೂಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವೇದಾಂತ ಭಾರತಿ ಸಂಸ್ಥೆ  "ವಿವೇಕದೀಪೀನಿ ರಾಷ್ಟ್ರೀಯ ಮಹಾ ಸಮಾವೇಶ " ಏರ್ಪಡಿಸಿತ್ತು. ಇಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಶ್ಲೋಕ ಪಠಣ ಮಾಡಿದರು. 
ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೇದಾಂತ ಭಾರತಿ ಸಂಸ್ಥೆಯ ಅಧ್ಯಕ್ಷ ಹಾಗೂ ಮಹಾಸಮಾವೇಶದ ಮುಖ್ಯಸ್ಥ ಎಸ್.ಎಸ್. ನಾಗಾನಂದ, ವೇದಾಂತ ಭಾರತಿ ಸಂಸ್ಥೆಯ ಟ್ರಸ್ಟಿ ಸಿ.ಎಸ್. ಗೋಪಾಲ ಕೃಷ್ಣ, ಟ್ರಸ್ಟ್ ನ ನಿರ್ದೇಶಕ ಶ್ರೀಧರ್ ಭಟ್ ವೇದಿಕೆ ಮೇಲಿದ್ದರು. 

ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಗೃಹ ಸಚಿವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಆತ್ಮೀಯವಾಗಿ ಬರಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com