ಉದ್ಯಮಿ ದುಡ್ಡಲ್ಲಿ ಪಾಂಡವಪುರ 'ಉಪ ವಿಭಾಗಾಧಿಕಾರಿ' ವಿದೇಶ ಪ್ರವಾಸ, ಮೋಜು ಮಸ್ತಿ!

ಸರ್ಕಾರದ ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್ ಶೈಲಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್‌ಗೆ ದೂರು ಸಲ್ಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಸರ್ಕಾರದ ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್ ಶೈಲಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್‌ಗೆ ದೂರು ಸಲ್ಲಿಸಲಾಗಿದೆ.

ದುಬೈ ಮೂಲದ ಉದ್ಯಮಿಯೊಬ್ಬರಿಗೆ ರೈತರ ಕೃಷಿ ಜಮೀನು ಕೊಡಿಸುವ ವಿಚಾರದಲ್ಲಿ ಕಾನೂನು ಬಾಹಿರವಾಗಿ ಅನುಕೂಲ ಮಾಡಿಕೊಟ್ಟು, ಅವರ ಆಮಿಷಕ್ಕೊಳಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಆರ್ ರವೀಂದ್ರ ದೂರು ನೀಡಿದ್ದಾರೆ.

ದುಬೈ ಮೂಲದ ಉದ್ಯಮಿ ಉಮರ್‌ಭಾವ ಅವರು ಮಂಗಳೂರಿನ ಸುಳ್ಳು ವಿಳಾಸ ನೀಡಿ, ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ, ಹಂಪಾಪುರ,ಹೆಬ್ಬಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ 44 ಎಕರೆ ಕೃಷಿ ಜಮೀನನ್ನು ಕ್ರಯಕ್ಕೆ ಪಡೆದಿದ್ದಾರೆ. ಈ ವೇಳೆ ಅವರು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 79(A) ಮತ್ತು 79 (B) ಉಲ್ಲಂಘನೆ ಮಾಡಿರುವುದನ್ನುಪತ್ತೆ ಹಚ್ಚಿದ ತಹಸೀಲ್ದಾರ್‌ರು ಉಮರ್ ಭಾವ ವಿರುದ್ಧ ಪಾಂಡವಪುರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. 

ಅದರಂತೆ ಉಪವಿಭಾಗಾಧಿಕಾರಿಯಾಗಿದ್ದ ಯಶೋಧ ಮಂಗಳೂರಿನ ವಿಳಾಸಕ್ಕೆ ನೋಟಿಸ್ ಕಳುಹಿಸಿದ್ದು ಆದರೆ ಅವರು ಆ ವಿಳಾಸದಲ್ಲಿ ವಾಸವಿಲ್ಲದ ಕಾರಣ ನೊಂದಣಿ ಅಂಚೆ ಪತ್ರಗಳು ವಾಪಸ್ ಬಂದಿದ್ದವು. ಆ ಹಿನ್ನೆಲೆಯಲ್ಲಿ ಉಪವಿಭಾಗಧಿಕಾರಿ ಸರ್ಕಾರದ ಪರ ಆದೇಶ ಮಾಡಿದ್ದರು. ಆದರೆ ಉಪವಿಭಾಗಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಉಮರ್‌ ಭಾವ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಇದರ ನಡುವೆ ಪಾಂಡುಪುರ ಉಪವಿಭಾಗಾಧಿಕಾರಿ ವಿ.ಆರ್ ಶೈಲಜಾ ಯಾವುದೇ ವಿಚಾರಣೆ ನಡೆಸದೆ ಉದ್ಯಮಿ ನೀಡಿದ ಆಸೆ ಆಮಿಷಕ್ಕೆ ಒಳಗಾಗಿದ್ದಾರೆ. ಅವರು ಆಯೋಜಿಸಿದ್ದ ದುಬೈ ಪ್ರವಾಸಕ್ಕೆ ಕುಟುಂಬ ಸಮೇತ ಹೋಗಿ ಬಂದಿದ್ದಾರೆ. ಪ್ರವಾಸದ ಸಂಪೂರ್ಣ ಖರ್ಚು ವೆಚ್ಚ ಉದ್ಯಮಿಯದ್ದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವರ್ಗಾವಣೆಗೊಂಡ ನಂತರ 2019ರ ಡಿ.13ರಂದು ಕರ್ತವ್ಯದಿಂದ ಬಿಡುಗಡೆಗೊಂಡ ವಿ.ಆರ್ ಶೈಲಜಾ 2019 ರ ಡಿ.18 ರಿಂದ ಡಿ. 30ರ ಅವಧಿಯಲ್ಲಿ ದುಬೈ ಪ್ರವಾಸಕ್ಕೆ ಏಳು ದಿನಗಳ ಕಾಲ ಹೋಗಿ ಬಂದಿದ್ದಾರೆ. 

ಪ್ರವಾಸದ ನಂತರ ನ್ಯಾಯಾಲಯದ ಮೊರೆ ಹೊಕ್ಕಿ ವರ್ಗಾವಣೆಗೆ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಹಾಜರದ ಅವರು ಉದ್ಯಮಿ ಉಮರ್ ಭಾವರಿಗೆ ಸಂಬಂಧಿಸಿದ ಕಡತಗಳಿಗೆ ಹಳೆ ದಿನಾಂಕ ನಮೂದಿಸಿ ಹಿಂದಿನ ಉಪವಿ
ಭಾಗಾಧಿಕಾರಿ ಯಶೋಧ ಹೊರಡಿಸಿದ್ದ ಆದೇಶಕ್ಕೆ ವ್ಯಕ್ತಿರಿಕ್ತರಾಗಿ ನಡೆದು ಕೊಂಡಿದ್ದಲ್ಲದೆ ಸರ್ಕಾರ ವಂಚಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಮಿ ಪರ ಆದೇಶ ಮಾಡಿದ್ದಾರೆ ಎಂದು ದೂರಿದ್ದಾರೆ.

ಪಾಂಡವಪುರ ಉಪವಿಭಾಗಾಧಿಕಾರಿ ಹೊರಡಿಸಿರುವ ಕಾನೂನು ಬಾಹಿರ ಆದೇಶವನ್ನು ರದ್ದುಮಾಡಬೇಕು. ಸರ್ಕಾರದ ಪೂರ್ವಾನುಮತಿಇಲ್ಲದೆ ವಿದೇಶ ಪ್ರವಾಸ ಕೈಗೊಂಡಿರುವ ವಿ.ಆರ್ ಶೈಲಜಾರನ್ನು ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com