ಬಾಂಬ್ ನ ಮಾಸ್ಟರ್ ಮೈಂಡ್ ನಾನೊಬ್ಬನೇ: ವಿಚಾರಣೆ ವೇಳೆ ಆದಿತ್ಯ ರಾವ್

ಮಂಗಳೂರು ಬಜ್ಪೆ ವಿಮಾನದಲ್ಲಿ ಸಜೀವ ಬಾಂಬ್ ಇಟ್ಟ ಮಾಸ್ಟರ್ ಮೈಂಡ್ ತಾನೊಬ್ಬನೆ ಎಂದು ಆರೋಪಿ ಆದಿತ್ಯ ರಾವ್ ತನಿಖಾಧಿಕಾರಿಗಳ ವಿಚಾರಣೆ ವೇಳೆ ಇಂದು ಬಾಯ್ಬಿಟ್ಟಿದ್ದಾನೆ.
ಆದಿತ್ಯ ರಾವ್
ಆದಿತ್ಯ ರಾವ್

ಮಂಗಳೂರು: ಮಂಗಳೂರು ಬಜ್ಪೆ ವಿಮಾನದಲ್ಲಿ ಸಜೀವ ಬಾಂಬ್ ಇಟ್ಟ ಮಾಸ್ಟರ್ ಮೈಂಡ್ ತಾನೊಬ್ಬನೆ ಎಂದು ಆರೋಪಿ ಆದಿತ್ಯ ರಾವ್ ತನಿಖಾಧಿಕಾರಿಗಳ ವಿಚಾರಣೆ ವೇಳೆ ಇಂದು ಬಾಯ್ಬಿಟ್ಟಿದ್ದಾನೆ.

ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ, ಆದಿತ್ಯ ನನ್ನು ವಿಚಾರಣೆ ನಡೆಸುತ್ತಿದ್ದು, ಆತನ ಬುದ್ಧಿವಂತಿಕೆ ಕಂಡು ತನಿಖಾಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ. 

ಪ್ರಕರಣಕ್ಕೆ ಆದಿತ್ಯ 'ಸಿಂಗಲ್ ಹ್ಯಾಂಡ್ ಆಪರೇಷನ್ ಏರ್‌ ಪೋರ್ಟ್‌" ಎಂದು ಹೆಸರು ನಮೂದಿಸಿದ್ದು, ಬಾಂಬ್ ನ ಮಾಸ್ಟರ್ ಮೈಂಡ್ ತಾನೊಬ್ಬನೆ. ಅಲ್ಲದೇ, ಬಾಂಬ್ ಇಡುವ ಬಗ್ಗೆ ಎರಡನೇ ವ್ಯಕ್ತಿಗೆ ಯಾವುದೇ ಮಾಹಿತಿ ಇಲ್ಲ ಎಂದು ಆದಿತ್ಯ ರಾವ್ ವಿಚಾರಣೆ ವೇಳೆ ಹೇಳಿರುವುದಾಗಿ ತಿಳಿದು ಬಂದಿದೆ.

ಬಾಂಬ್ ತಯಾರಿಕೆಗೆ ಆದಿತ್ಯ ಸುಮಾರು 100 ಕ್ಕೂ ಹೆಚ್ಚು ಬಗೆಯ ಸಾಮಾಗ್ರಿ ಖರೀದಿಸಿ, ಕೆಲ ವೆಬ್ ಸೈಟ್ ಮೂಲಕ ಬಾಂಬ್ ತಯಾರಿ ಮಾಡುವ ಕುರಿತು ಮಾಹಿತಿ ಸಂಗ್ರಹಿಸಿದ್ದನು ಎಂದು ತಿಳಿದು ಬಂದಿದೆ. ಪೊಲೀಸರು ಕಲೆ ಹಾಕಿದ ಸಾಕ್ಷಿಗೂ ಈತನ ಹೇಳಿಕೆಗೂ ಸಾಮ್ಯತೆ ಇದೆ ಎನ್ನಲಾಗಿದೆ. 

ಮಂಗಳೂರಿಗೆ ಬುಧವಾರ ರಾತ್ರಿ ಆರೋಪಿ ಆದಿತ್ಯ ರಾವ್ ನನ್ನು ಕರೆತಂದಿರುವ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ನಿನ್ನೆ ರಾತ್ರಿ ಸುಮಾರು 2 ಗಂಟೆವರೆಗೆ ವಿಚಾರಣೆ ನಡೆಸಿದ್ದರು. ಆದರೆ, ನಿನ್ನೆ ಆದಿತ್ಯ, ತನ್ನಿಂದ ತಪ್ಪಾಗಿದೆ ಎನ್ನುವುದು ಬಿಟ್ಟರೇ, ತನಿಖಾಧಾಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಮೌನವಹಿಸಿದ್ದ ಎಂದು ತಿಳಿದು ಬಂದಿದೆ.

ಪಣಂಬೂರಿನ ಎಸಿಪಿ ಕಚೇರಿಯಲ್ಲಿ ಆದಿತ್ಯ ರಾವ್ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕಚೇರಿ ಪ್ರವೇಶ ದ್ವಾರದ ಬಳಿ ಮೆಟೆಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಕಚೇರಿ ಒಳಗೆ ಮೊಬೈಲ್ ನಿಷೇಧಿಸಲಾಗಿದ್ದು, ಕಚೇರಿ ಪ್ರವೇಶಿಸುವವರು ಸೆಕ್ಯೂರಿಟಿ ಡೆಸ್ಕ್ ನಲ್ಲಿ ಮೊಬೈಲ್ ಇಡಲು ಪೊಲೀಸರು ಕೌಂಟರ್ ತೆರೆದಿದ್ದಾರೆ. ಎಸಿಪಿ ಕಚೇರಿಯಲ್ಲೇ ಪೊಲೀಸ್ ಸಿಬ್ಬಂದಿಗೆ ಭೋಜನ ತಯಾರಿಸಲು ಸ್ಥಳೀಯ ಬಾಣಸಿಗನೊಬ್ಬನಿಗೆ ಕರೆತರಲಾಗಿದೆ.

ಅಲ್ಲದೇ, ಬಾಂಬರ್ ಆದಿತ್ಯಾ ಭದ್ರತೆಗೆ 50ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ವಿಚಾರಣೆ ವೇಳೆ ಆದಿತ್ಯ ರಾವ್ ವಿಚಿತ್ರವಾಗಿ ವರ್ತಿಸುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಆದಿತ್ಯ ರಾವ್ ನನ್ನು ಮಂಗಳೂರಿನ 6ನೇ ಜೆ.ಎಂ.ಎಫ್.ಸಿ ಕೋರ್ಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸುವ ಮುನ್ನ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. 

ಆಪ್ತ ಸಮಾಲೋಚಕರಿಂದ ಆದಿತ್ಯ ರಾವ್ ಮಾನಸಿಕ ಸ್ಥಿತಿಗತಿ ಬಗ್ಗೆ ಅವಲೋಕನ ನಡೆಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆ ಸಾಧ್ಯತೆ‌ ಇದೆ ಎನ್ನಲಾಗಿದೆ. 

ಸದ್ಯ ಎಸಿಪಿ ಬೆಳ್ಳಿಯಪ್ಪ ಆದಿತ್ಯ ರಾವ್ ವಿಚಾರಣೆಗೆ ಯನ್ನು ಮುಂದುವರೆಸಿದ್ದಾರೆ  ಇನ್ನು ಈ ಮುಂಚೆ ಮಂಗಳೂರಿನ ಕ್ವಾಲಿಟಿ ಕುಡ್ಲ ಹೊಟೇಲ್ ನಲ್ಲಿ  ಕೆಲಸ ಗಿಟ್ಟಿಸಿಕೊಳ್ಳಲು ಆದಿತ್ಯ ರಾವ್ ನೀಡಿದ್ದ ಬಯೋಡೇಟಾ ಮಾಧ್ಯಮಗಳಿಗೆ ಲಭ್ಯವಾಗಿದೆ. ಬಯೋಡೇಟಾದಲ್ಲಿ  ಧನಾತ್ಮಕವಾದ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತದೆ ಎಂದು‌ ಆರೋಪಿ ಆದಿತ್ಯ ಬಯೋಡಾಟದ ಕೊನೆಯ ಸಾಲಿನಲ್ಲಿ ಉಲ್ಲೇಖಿಸಿದ್ದ.

ಆದಿತ್ಯರಾವ್ ಮೇಲೆ ಮತ್ತೊಂದು ದೂರು:
ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಆದಿತ್ಯ ರಾವ್ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಇಂಡಿಗೋ ಅಧಿಕಾರಿಗಳು ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯರಾವ್, ಇಂಡಿಗೋ ವಿಮಾನ ಹೈದರಾಬಾದಿಗೆ ತೆರಳುತ್ತಿರುವ ಸಂದರ್ಭದಲ್ಲಿ ಮ್ಯಾನೇಜರ್ ಅವರಿಗೆ ಕರೆ ಮಾಡಿ, ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಸಿದ್ದ.ಈ ಹುಸಿ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯ ವಿರುದ್ಧ ಇಂಡಿಗೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. 

ಅಂದು ಟೇಕ್ ಆಫ್ ಆಗಲು ಸಿದ್ಧಗೊಂಡಿದ್ದ 136  ಪ್ರಯಾಣಿಕರಿದ್ದ ವಿಮಾನವನ್ನು, ಏರಪೋರ್ಟ್ ಸಿಬ್ಬಂದಿ ಕೆಳಗಿಳಿಸಿ, ವಿಮಾನವನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಸಿತ್ತು. ಕೊನೆಗೆ ಅದೊಂದು ಹುಸಿ ಕರೆ ಎಂಬುದು ಗೊತ್ತಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com