ಗಂಗಾವತಿ: ಸರ್ಕಾರಿ ಆಸ್ಪತ್ರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಂಜೆತನ ತಪಾಸಣಾ ಶಿಬಿರ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಬಂಜೆತನ (ಇನ್‍ಫರ್ಟಿಲಿಟಿ) ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಜ್ಞವೈದ್ಯರು ಶಿಬಿರ ಆಯೋಜಿಸಿದ್ದರು. 
ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ವೈದ್ಯರಿಂದ ತಪಾಸಣೆ
ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ವೈದ್ಯರಿಂದ ತಪಾಸಣೆ

ಗಂಗಾವತಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಬಂಜೆತನ (ಇನ್‍ಫರ್ಟಿಲಿಟಿ) ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಜ್ಞವೈದ್ಯರು ಶಿಬಿರ ಆಯೋಜಿಸಿದ್ದರು. 

ಸ್ವಚ್ಛತೆ, ಗುಣಮಟ್ಟದ ಚಿಕಿತ್ಸೆ, ಉತ್ತಮ ಸೌಲಭ್ಯ, ಸಿಟಿ ಸ್ಕ್ಯಾನಿಂಗ್, ನವಜಾತ ಶಿಶುಗಳ ಆರೈಕೆ ಹೀಗೆ ಹತ್ತಾರು ವಿಭಾಗದಲ್ಲಿನ ಸೇವೆಗೆ ಇಡೀ ರಾಜ್ಯಮಟ್ಟದಲ್ಲಿ ಆಸ್ಪತ್ರೆ ಸದ್ದು ಮಾಡಿದೆ. ಅಲ್ಲದೇ ಇತ್ತೀಚೆಗಷ್ಟೆ ಮಂಡಿಚಿಪ್ಪು ಬದಲಾವಣೆ, ಬೆನ್ನುಹುರಿಯಂತ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿತ್ತು. 

ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ, ದುಬಾರಿ ವೆಚ್ಚ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಕ್ಕುವ ಬಂಜೆತನ ನಿವಾರಣೆ ಹಾಗೂ ಸಂತಾನ (ಫರ್ಟಿಲಿಟಿ) ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. 

ಈ ಮೂಲಕ ಸಂತಾನ ರಹಿತ ಸಾವಿರಾರು ದಂಪತಿಗಳ ಬಾಳಲ್ಲಿ ಆಶಾಕಿರಣ ಮೂಡಿಸುವ ಯತ್ನಕ್ಕೆ ಕೈಹಾಕಿದೆ. ಸಂತಾನ ಚಿಕಿತ್ಸೆಗೆ ಇದುವರೆಗೆ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ತಾಲ್ಲೂಕು ಹಂತದ ಆಸ್ಪತ್ರೆಗಳ ಪೈಕಿ ಗಂಗಾವತಿ ಆಸ್ಪತ್ರೆಯ ವೈದ್ಯರು ಮುನ್ನುಡಿ ಬರೆದಿದ್ದಾರೆ. 

ದಂಪತಿಗಳ ಬಂಜೆತನ ನಿವಾರಣೆಯ ಕ್ಷೇತ್ರದಲ್ಲಿ ಎರಡು ದಶಕದಿಂದ ಶ್ರಮಿಸುತ್ತಿರುವ ಭಾರತದ ಮುಂಚೂಣಿ ಸಂಸ್ಥೆ ಬೆಂಗಳೂರಿ ಮಿಲನ ಸಂಸ್ಥೆಯ ತಜ್ಞ ವೈದ್ಯರ ತಂಡ, ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ 160ಕ್ಕೂ ಪ್ರಕರಣಗಳನ್ನು ಪರಿಶೀಲಿಸಿದರು. 

ಮದುವೆಯಾಗಿ ಒಂದು ವರ್ಷದಿಂದ ಹತ್ತು ವರ್ಷದವರೆಗಿನ ದಂಪತಿಗಳು, ಸಂತಾನ ಅಪೇಕ್ಷೆಯಿಂದ ಸಾಕಷ್ಟು ಕಡೆಗಳಲ್ಲಿ ತೋರಿಸಿಯೂ ಯಾವುದೇ ಪ್ರಯೋಜನವಾಗದ ನೂರಾರು ದಂಪತಿಗಳು ತಮ್ಮ ಹಳೇಯ ಚಿಕಿತ್ಸಾ ಕಡತಗಳನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದರು. 

ಬಂಜೆತನ ಚಿಕಿತ್ಸೆ ಎಂಬುವುದು ಕೇವಲ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿತ್ತು. ಲಕ್ಷಾಂತರ ರೂಪಾಯಿ ವೆಚ್ಚದ ಈ ಚಿಕಿತ್ಸೆ ಬಡ ಜನರಿಗೂ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ತಜ್ಞವೈದ್ಯರಿಂದ ತಪಾಸಣೆ ನಡೆಸಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಲಭ್ಯವಿರುವ ಔಷಧೋಪಚಾರದ ನೆರವಿನಿಂದ ಚಿಕಿತ್ಸೆ ಕೊಡಲಾಗುವುದು ಎಂದು ವೈದ್ಯರು ತಿಳಿಸಿದರು. 

ವರದಿ: ಶ್ರೀನಿವಾಸ ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com