ಕೊರೋನಾ ಸೋಂಕು ಲಕ್ಷಣ ಕಡಿಮೆ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆಗೆ ಪರಿಶೀಲನೆ: ಸಿಎಂ ಯಡಿಯೂರಪ್ಪ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ವೇಗ ತಗ್ಗಿಸಿ ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುವ ಕುರಿತು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ವೇಗ ತಗ್ಗಿಸಿ ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುವ ಕುರಿತು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕೊರೋನಾ ರೋಗ ಲಕ್ಷಣ ಕಡಿಮೆ ಪ್ರಮಾಣದಲ್ಲಿದ್ದರೆ ಮನೆಯಲ್ಲಿಯೇ ಕ್ವಾರೆಂಟೀನ್ ಮಾಡಿ ಚಿಕಿತ್ಸೆ ನೀಡುವ ಕುರಿತಂತೆಯೂ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ. 

ಕೊರೋನಾ ಸೋಂಕು ನಿಯಂತ್ರಣ ಕುರಿತು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸೋಂಕು ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಕರ್ಫ್ಯೂ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ಆಸ್ಪತ್ರೆಗಳಿಗೆ ಆಮ್ಲಜನಕ, ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರುವಂತ ನೋಡಿಕೊಳ್ಳುವ ಜತೆಗೆ ಕೋವಿಡ್ ಕುರಿತು ಭೀತಿಯ ವಾತಾವರಣ ನಿವಾರಿಸಲು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು. ತಜ್ಞರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
 
ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಅಳವಡಿಸುವ ಕುರಿತು ಚರ್ಚೆ ನಡೆಸಲಾಗಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಬೇಕಾಬಿಟ್ಟಿ ಸಂಚರಿಸಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಜನರಲ್ಲಿ ಅರಿವು ಮೂಡಿಸಲು 600 ಕ್ಕೂ ಹೆಚ್ವು ಆಟೋಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಇನ್ನು ಮುಂದೆ ಕರ್ಫ್ಯೂ ಕಠಿಣವಾಗಿ ಜಾರಿಯಾಗಲಿದೆ ಎಂದರು. 

ಅನ್ಲಾಕ್ ಹಂತದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ ಇದು ಆತಂಕಕಾರಿಯಾಗಿದೆ. ಇತರ ಮಹಾನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆ. ಹಾಗೆಂದು ನಾವು ಕೈಕಟ್ಟಿ ಕೂರಲಾಗದು. ಏಕಾಏಕಿ ಭಾರಿ ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಖಾಸಗಿ ವೈದ್ಯಕೀಯ ಸೇವೆಯನ್ನೂ ಸಹ ಪಡೆದುಕೊಳ್ಳಲಾಗುವುದು ಎಂದರು.
 
ರೋಗ ಲಕ್ಷಣ ಇಲ್ಲದ ಸೋಂಕಿತರ ಆರೈಕೆಗೆ ಕೋವಿಡ್ ಕೇರ್ ಸೆಂಟರ್ಗಳನ್ನು ಸಿದ್ಧಪಡಿಲಾಗುತ್ತಿದೆ. ದೇಶಾದ್ಯಂತ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರ ಸಲಹೆಗೆ ಆದ್ಯತೆ ನೀಡಲಾಗುವುದು. ನಿಮ್ಮ ಸಲಹೆ, ಮಾರ್ಗದರ್ಶನ ನಮಗೆ ಅತಿ ಅಗತ್ಯ ಎಂದು ಯಡಿಯೂರಪ್ಪ ಹೇಳಿದರು. 

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಹಿರಿಯ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಆಯುಕ್ತರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಕಂಟೇನ್ಮೆಂಟ್ ವಲಯದಲ್ಲಿ ಸೀಲ್ ಡೌನ್ ಅನ್ನು ಪರಿಣಕಾರಿಯಾಗಿ ಜಾರಿಮಾಡಬೇಕು. ಸೀಲ್ ಡೌನ್ ಮಾರ್ಗಸೂಚಿಯನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಲಾಗಿದೆ ಎಂದರು. 

ವಿದೇಶದಿಂದ ಬಂದವರಿಗೆ ಯಾವ ರೀತಿ ಸೋಂಕು ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆಯೋ ಅದೇ ಮಾದರಿಯಲ್ಲಿ ಸೋಂಕಿತರ ಓಡಾಟದ ಮೇಲೆ ನಿಗಾ ಇಡಬೇಕು. ಇದಕ್ಕಾಗಿ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು. 

ಸ್ಪರ್ಶ್ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಮಾತನಾಡಿ. ಯಾವ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಎಷ್ಟೇಷ್ಟು ಹಾಸಿಗೆಗಳು ಇವೆ ಎನ್ನುವುದು ಗೊತ್ತಾಗಬೇಕು. ಇದರಿಂದ ಅನಗತ್ಯ ಸಂಚಾರ ತಪ್ಪುತ್ತದೆ. ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವುದು ಸೂಕ್ತ. ಮಾಧ್ಯಮಗಳ ವರದಿ ನೋಡಿ ಬಹಳಷ್ಟು ಗಾಬರಿಗೆ ಒಳಗಾಗುತ್ತಿದ್ದಾರೆ. ಜನರಲ್ಲಿ ವಿಶ್ವಾಸಮೂಡಿಸಬೇಕು. ಗುಣಮುಖರಾದವರು ಆರಾಮವಾಗಿ ಮನೆಗೆ ಹೋಗಿದ್ದಾರೆ. ರೋಗ ಲಕ್ಷಣ ಇಲ್ಲದೇ ಪಾಸಿಟಿವ್ ಬಂದಿರುವವರು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಉಸಿರಾಟದ ತೊಂದರೆ ಎದುರಾದಲ್ಲಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದರು. 

ಮಣಿಪಾಲ್ ಸಮೂಹ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಜನರನ್ನು ಗಾಬರಿಗೆ ಒಳಗಾಗುವಂತೆ ಮಾಡಬಾರದು. ಮಾಧ್ಯಮಗಳು ಜನರನ್ನ ಹೆದರಿಸುವುದು ಸಲ್ಲದು. ಆಸ್ಪತ್ರೆಗಳಲ್ಲಿ ಬೆಡ್ ಗಳಿಗೆ ತೊಂದರೆಯಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಸೇರಿ ಕೆಲಸ ಮಾಡಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com