ಕೊರೋನಾ ಸೋಂಕು ನಿರ್ವಹಣೆಗೆ 382 ಕೋಟಿ ರೂ. ಬಿಡುಗಡೆ: ಸಚಿವ ಆರ್. ಅಶೋಕ್

ಕೊರೋನಾ ಸೋಂಕು ನಿರ್ವಹಣೆಗಾಗಿ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ 382 ಕೋಟಿ ರೂ ಬಿಡುಗಡೆಗೊಳಿಸಿದ್ದು, ಸದ್ಯ 300 ಕೋಟಿಗೂ ಅಧಿಕ ಹಣ ಲಭ್ಯವಿದ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಬುಧವಾರ ಹೇಳಿದ್ದಾರೆ.

Published: 01st July 2020 04:23 PM  |   Last Updated: 01st July 2020 05:42 PM   |  A+A-


Minister R Ashok

ಸಚಿವ ಆರ್ ಅಶೋಕ್

Posted By : Lingaraj Badiger
Source : UNI

ಚಿಕ್ಕಮಗಳೂರು: ಕೊರೋನಾ ಸೋಂಕು ನಿರ್ವಹಣೆಗಾಗಿ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ 382 ಕೋಟಿ ರೂ ಬಿಡುಗಡೆಗೊಳಿಸಿದ್ದು, ಸದ್ಯ 300 ಕೋಟಿಗೂ ಅಧಿಕ ಹಣ ಲಭ್ಯವಿದ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಬುಧವಾರ ಹೇಳಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್ಥಿಕತೆ, ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಲ್ಲಿ ಹಣದ ಸದುಪಯೋಗಪಡಿಸಿಕೊಳ್ಳಲಾಗುವುದು. ಕೊರೋನಾ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿಕಾರ್ಯಗಳು ಸರಾಗವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಲಾಕ್‌ಡೌನ್ ವೇಳೆಗೆ ಜನರು ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಗುಣಮಟ್ಟದೊಂದಿಗೆ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಆರ್. ಅಶೋಕ್ ಹೇಳಿದ್ದಾರೆ.

ಸಚಿವರು ನಗರದ ಪವಿತ್ರವನ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣ ಕಾಮಗಾರಿಗೆ ಈಗಾಗಲೇ ರೂ.25 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಜೊತೆಗೆ 5 ಕೋಟಿ ರೂ ವೆಚ್ಚದ ಕಾಮಗಾರಿಯು ಪೂರ್ಣಗೊಂಡಿದೆ, ಕೆಲವು ಕಾರಣಾಂತರಗಳಿಂದಾಗಿ ಕಟ್ಟಡ ಕಾಮಗಾರಿ ಪ್ರಗತಿ ವಿಳಂಬವಾಗಿದ್ದು ಈ ಬಗ್ಗೆ ಚರ್ಚಿಸಿ ಪರಿಹರಿಸುವ ಮೂಲಕ ಇಲ್ಲಿನ ಜನತೆಗೆ ಇದರ ಅನುಕೂಲ ದೊರಕುವಂತೆ ಮಾಡಲಾಗುವುದು ಎಂದರು.

ಕಾಮಗಾರಿಗೆ ಸಂಬಂಧಿಸಿದಂತೆ ಕಚೇರಿಯನ್ನು ನಗರ ಭಾಗದಲ್ಲಿ ನಿರ್ಮಿಸಬೇಕು ಎಂಬ ಸಲಹೆಗಳು ಕೇಳಿಬಂದಿದ್ದು ಇಲ್ಲಿಯೇ ನಿರ್ಮಿಸಬೇಕೋ ಅಥವಾ ಸ್ಥಳಾಂತರ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿವೆ. ಸ್ಥಳಾಂತರವಾದಲ್ಲಿ ಕೆಲವೊಂದು ಆಡಿಟ್ ಸಮಸ್ಯೆಗಳು ಎದುರಾಗಬಹುದು. ಜೊತೆಗೆ ಕಾಮಗಾರಿಗೆ ಈಗಾಗಲೇ 5 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಬೇರೆ ಇಲಾಖೆಗಳು ಈ ಕಟ್ಟಡವನ್ನು ಕೊಳ್ಳುವಂತಿದ್ದರೆ ಈ ಕಚೇರಿಯನ್ನು ನಗರ ಭಾಗದಲ್ಲಿ ನಿರ್ಮಿಸಲು ಸಾಧ್ಯವಾಗಲಿದೆ ಎಂದ ಅವರು, ಇಲ್ಲಿನ ಪ್ರದೇಶವು ವಿಶಾಲವಾಗಿದ್ದು ಪಾರ್ಕಿಂಗ್, ಸೇರಿದಂತೆ ವಿವಿಧ ಸಮಸ್ಯೆಗಳನ್ನು ನೀಗಿಸಲಿದೆ ಎನ್ನುವ ಉದ್ದೇಶದಿಂದ ಈ ಜಾಗದಲ್ಲಿ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಕಟ್ಟಡ ನಿರ್ಮಾಣ ಜಾಗಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬರು ಕೋರ್ಟ್‌ನಲ್ಲಿ ದಾವೆ ಹೂಡಿದ್ದು ಇದನ್ನು ಚರ್ಚಿಸಿ ಪರಿಹರಿಸಿಕೊಳ್ಳುವ ಮೂಲಕ ಬದಲಿ ಜಾಗ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ನಮ್ಮ ಸರ್ಕಾರದ ಅವಧಿಯಲ್ಲೇ ಇದರ ಕಾಮಗಾರಿ ಪೂರ್ಣಗೊಳಿಸಲು ಶ್ರಮವಹಿಸಲಾಗುವುದು ಅದಕ್ಕಾಗಿ ಬೇಕಾಗುವ ಅನುದಾನವನ್ನು ಬಿಡಗಡೆಗೊಳಿಸಲು ಬದ್ಧ ಎಂದರು.

ಕೋರೋನಾ ಸೋಂಕು ಕುರಿತು ಮಾತನಾಡಿದ ಅವರು, ಇದೊಂದು ವಿಶ್ವವ್ಯಾಪಿ ಹರಡಿರುವ ಸೋಂಕು ಕೆಲವೇ ದಿನಗಳಲ್ಲಿ ಸಂಪೂರ್ಣವಾಗುವಂತದ್ದಲ್ಲ, ಇದರ ನಿವಾರಣೆಗೆ ಸರ್ಕಾರದೊಂದಿಗೆ ಜನರು ಕೈಜೋಡಿಸಬೇಕು. ದೆಹಲಿ, ಕೊಲ್ಕತ್ತ, ಚೆನ್ನೈ, ಬಾಂಬೆಯಂತಹ ಮಹಾನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜೊತೆಗೆ ಸಾರ್ವಜನಿಕ ಸ್ಥಳ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದಾರೆ. ಆದ್ದರಿಂದ ಜುಲೈ 7ರ ಎಸ್.ಎಸ್.ಎಲ್.ಸಿ ಪರೀಕ್ಷೆ ನಂತರ ಪ್ರತಿ ಭಾನುವಾರ ಮತ್ತು ಶನಿವಾರ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡುವ ಕುರಿತು ಯೋಚಿಸಲಾಗುತ್ತಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾತನಾಡಿ, ಕೊರೋನಾ ಲಾಕ್‌ಡೌನ್ ವೇಳೆ ಬಡವರ ಸಂಕಷ್ಟವನ್ನು ಅರಿತು ದೇಶದ ಪ್ರಧಾನಮಂತ್ರಿಗಳು 80 ಕೋಟಿ ಜನತೆಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಪಡಿತರ ವಿತರಣೆಯನ್ನು ನವೆಂಬರ್‌ವರೆಗೂ ವಿಸ್ತರಿಸಿ ಬಡವರ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದರು.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಇದನ್ನು ನಗರದ ದಂಟರಮಕ್ಕಿ ಬಳಿಯ ತೋಟಗಾರಿಕೆ ಇಲಾಖೆಯ 11 ಎಕರೆ ಜಾಗದಲ್ಲಿ ನಿರ್ಮಾಣ ಮಾಡುವ ಕುರಿತು ಸಲಹೆಗಳು ಕೇಳಿಬಂದಿವೆ. ಸದ್ಯ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜು ನಿಮಾರ್ಣಕ್ಕಾಗಿ ರೂ. 58 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಾಗದ ಹುಡುಕಾಟ ನಡೆಸಲಾಗುತ್ತಿದ್ದು ಇಲ್ಲಿನ ಕಟ್ಟಡದ ತಾಂತ್ರಿಕತೆ ಒಪ್ಪಿಗೆಯಾದಲ್ಲಿ ಈ ಜಾಗವನ್ನು ಕಾಲೇಜನ್ನಾಗಿ ಮಾರ್ಪಡಿಸಿ ಕಛೇರಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗುವುದು ಎಂದರು.

ಇದೇ ವೇಳೆ ವಿಶ್ವ ವೈದ್ಯರ ದಿನದ ವಿಶೇಷವಾಗಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು, ಸಿಬ್ಬಂದಿಗಳನ್ನು ಇಬ್ಬರು ಸಚಿವರು ಸ್ಮರಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಡಿ.ಎನ್. ಜೀವರಾಜ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಮಾಜಿ ನಗರ ಸಭಾ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp