ಕೊರೋನಾ ಭೀತಿ ಸೃಷ್ಠಿಸಿರುವ ಅವಾಂತರ: ಒಂದೂರಿನ ಶವ ಮತ್ತೊಂದು ಊರಲ್ಲಿ, ಮೃತದೇಹ ಕಂಡು ಗ್ರಾಮಸ್ಥರು ಗಾಬರಿ!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ  ಬೇರೊಂದು ಊರಿನ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿರುವ ಪ್ರಸಂಗ ಇಂದು ನಡೆದಿದೆ.

Published: 09th July 2020 12:33 AM  |   Last Updated: 09th July 2020 12:16 PM   |  A+A-


DeadBody1

ಮೃತದೇಹ

Posted By : Nagaraja AB
Source : RC Network

ಮಂಡ್ಯ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ,ಏನೆಲ್ಲಾ ಸಾಧನೆ ಮಾಡಿದ್ದರೂ ಮನುಷ್ಯನಿಗೆ ಸಾವಿನ ಕೊನೆಗಾಲದಲ್ಲಿಯೂ ಮುಕ್ತಿ ಸಿಗದಂತಹ ಪರಿಸ್ಥಿತಿ ತಂದಿಟ್ಟಿದೆ.ನಿತ್ಯವೂ ಒಂದಲ್ಲಾ ಒಂದು ರೀತಿಯ ಅವಾಂತರಗಳನ್ನು ಸೃಷ್ಠಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ,ಅಂತೆಯೇ ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ  ಬೇರೊಂದು ಊರಿನ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿರುವ ಪ್ರಸಂಗ ಇಂದು ನಡೆದಿದೆ.

ನಾಗರಾಜು (೫೧) ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ ಯಾಗಿದ್ದಾರೆ.ಮೂಲತಃ ಟಿ.ನರಸಿಪುರ ತಾಲೂಕಿನ ಮುಸುಕನಕೊಪ್ಪಲು ಗ್ರಾಮದವರಾದ ನಾಗರಾಜು  ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು.ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಹಾವಳಿ ಹಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಗಾಬರಿಗೊಂಡ ನಾಗರಾಜು ಮಂಗಳವಾರ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಹೊರಟ್ಟಿದ್ದರು. ಆದರೆ, ತಮ್ಮ ಗ್ರಾಮಕ್ಕೆ ಹೋಗುವಷ್ಟಲ್ಲಿ ಕತ್ತಲಾಗುತ್ತಿದ್ದುದರಿಂದ ತಮ್ಮ ಸಂಬಂಧಿಕರ ಮನೆಯಿದ್ದ ಮಳವಳ್ಳಿ ತಾಲ್ಲೂಕಿನ ಹೊನಗನಹಳ್ಳಿಗೆ ಬಂದು ಉಳಿದುಕೊಂಡಿದ್ದರು.

ಮಂಗಳವಾರ ರಾತ್ರಿ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೊಳ್ಳೆಗಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಂತರ ಸಂಬಂಧಿಕರು ನಾಗರಾಜು ಶವವನ್ನು ಟಿ.ನರಸೀಪುರದ ಮೃತನ ಸ್ವಗ್ರಾಮ ಮುಸುಕನಕೊಪ್ಪಲು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಕೊರೋನಾ ಪರೀಕ್ಷೆ ಮಾಡಿಸದ ಹೊರತು ಅಂತ್ಯಕ್ರಿಯೆ ಮಾಡಲು ಬಿಡೋದಿಲ್ಲ ಅಂತ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ.

ಇದರಿಂದ ದಾರಿಕಾಣದೆ ಸಂಬಂಧಿಕರು ಹೊನಗನಹಳ್ಳಿ ಗ್ರಾಮಕ್ಕೆ ಶವ ತೆಗೆದುಕೊಂಡು ಬಂದು ಮನೆಯೊಂದರ ಮುಂಭಾಗದಲ್ಲಿ ಇಟ್ಟಿದ್ದಾರೆ. ಮನೆಯ ಪಡಸಾಲೆಯ ಮೇಲೆ ಈ ಶವ ಅನಾಥವಾಗಿ ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಅಲ್ಲದೇ ಇವರಿಗೆ ಕೊರೋನಾ ಪರೀಕ್ಷೆ ಮಾಡಿಸದೆ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಅಂತ ಅಲ್ಲಿಯೂ ಹೇಳಿದ್ದಾರೆ. ಇದರಿಂದ ಚಿಂತೆಗೀಡಾದ ಮೃತನ ಸಂಬಂಧಿಕರು ವೈದ್ಯರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ವೈದ್ಯರು ತಡವಾಗಿ ಗ್ರಾಮಕ್ಕೆ ಬಂದಿದ್ದಲ್ಲದೇ, ``ನಾವು ಶವಕ್ಕೆ ಕೋವಿಡ್ ಪರೀಕ್ಷೆ ಮಾಡೋದಿಲ್ಲ. ಬೇಕಿದ್ದರೆ ಅವರ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿ ಗ್ರಾಮದಿಂದ ವಾಪಸ್ ಹೋಗಿದ್ದಾರೆ.

ಕೊನೆಗೆ ಮೃತನಾಗರಾಜು ಶವದ ಅತಂತ್ರ ಸ್ಥಿತಿಯ ಮಾಹಿತಿ ತಿಳಿದ ಮುಸುಕನಕೊಪ್ಪಲು ಗ್ರಾಮಸ್ಥರು ಊರಿನ ಹೊರಗಡೆ ಶವ ಸಂಸ್ಕಾರ ಮಾಡಲು ಒಪ್ಪಿಗೆ ನೀಡಿದ್ದಾರೆ. ಬಳಿಕ ಮಂಡ್ಯ ಜಿಲ್ಲೆಯ ಹೊನಗನಹಳ್ಳಿಯಿಂದ ಟಿ.ನರಸೀಪುರ ಬಳಿಯ ಮೃತನ ಸ್ವಗ್ರಾಮ ಮುಸುಕನಕೊಪ್ಪಲಿಗೆ ಶವ ರವಾನೆ ಮಾಡಿದ್ದಾರೆ.

ವೈದ್ಯಾಧಿಕಾರಿಗಳು ಶವ ರವಾನೆಗೆ ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಯನ್ನು ಕಳಿಸದೆ ಎಡವಟ್ಟು ಮಾಡಿದ್ದಾರೆ. ಕುಟುಂಬಸ್ಥರಿಗೆ ಎರಡು ಪಿಪಿಇ ಕಿಟ್ ನೀಡಿ ನೀವೇ ಶವಸಂಸ್ಕರಾ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.ಕೊನೆಗೆ ಸಂಬಂಧಿಕರು ಪಿಪಿಇ ಕಿಟ್ ಹಾಕಿಕೊಂಡು ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ಹೋಗಿದ್ದು ಮಸುಕನಕೊಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ
 ಕೊರೋನಾ ಮಹಾ ಮಾರಿ ಇದೀಗ ಮನುಷ್ಯನಿಗೆ ಸಾವಿನ ಕೊನೆ ಕ್ಷಣಗಳಲ್ಲಿಯೂ ನೆಮ್ಮದಿಯಿಂದ ಶವಕ್ಕೆ ಮುಕ್ತಿದೊರಕದಂತಹ ಪರಿಸ್ಥಿತಿ ತಂದೊಡ್ಡಿರುವುದು ದುರಂತವೇ ಸರಿ.

ವರದಿ: ನಾಗಯ್ಯ

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp