ಸಿ.ವಿ.ರಾಮನ್ ಆಸ್ಪತ್ರೆಗೆ ಸಚಿವ ಡಾ. ಸುಧಾಕರ್ ದಿಢೀರ್ ಭೇಟಿ; ಕಟುಕರಾಗದೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಲು ಸೂಚನೆ

ಕೋವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಿವಿಮಾತು ಹೇಳಿದರು.
ಸಿ.ವಿ. ರಾಮನ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ದಿಢೀರ್ ಭೇಟಿ
ಸಿ.ವಿ. ರಾಮನ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ದಿಢೀರ್ ಭೇಟಿ

ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಿವಿಮಾತು ಹೇಳಿದರು.

ಗುರುವಾರ ಇಂದಿರಾನಗರದಲ್ಲಿರುವ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಚಿವರು  ತರಾಟೆಗೆ ತೆಗೆದುಕೊಂಡರು.

ಹೈಪ್ಲೊ ಆಕ್ಸಿಜನ್ ಸೌಲಭ್ಯ, 15 ಹಾಸಿಗೆಗಳಿಗೆ ಇದ್ದರೂ ಕೇವಲ ಇಬ್ಬರು ರೋಗಿಗಳನ್ನು ದಾಖಲು ಮಾಡಿಕೊಂಡು ಉಳಿದ ಹದಿಮೂರು ಹಾಸಿಗೆ ಖಾಲಿ ಇಟ್ಟು ಕೊಳ್ಳಲಾಗಿತ್ತು. ಹಾಗೆಯೇ ಮಾರ್ಗಸೂಚಿಗೆ ವಿರುದ್ಧವಾಗಿ ಲಘು ಮತ್ತು ಮಧ್ಯಮ ರೋಗ ಲಕ್ಷಣ ಇದ್ದವರನ್ನೂ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸದೆ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದನ್ನು ಗಮನಿಸಿ ಅಧೀಕ್ಷಕರು ಮತ್ತು ಸಿಬ್ಬಂದಿ ವಿರುದ್ಧ ಸಚಿವ ಸುಧಾಕರ್ ಹರಿಹಾಯ್ದರು.

ಸ್ವಾಬ್ ಸಂಗ್ರಹ ವಿಷಯದಲ್ಲೂ ಕಡಿಮೆ ಸಂಗ್ರಹ ಮಾಡುತ್ತಿರುವುದನ್ನು ಗಮನಿಸಿ ದಿನಕ್ಕೆ ಕನಿಷ್ಠ 500 ಸ್ಯಾಂಪಲ್ ಸಂಗ್ರಹ ಮಾಡಲೇಬೇಕು ಎಂದು ಸೂಚನೆ ನೀಡಿದರು. ಐಸಿಯು ಮತ್ತು ವೆಂಟಿಲೇಟರ್ ಅಳವಡಿಕೆಯಲ್ಲಿ ವಿಳಂಬ ಆಗಿರುವುದನ್ನು ಕಂಡ ಸಚಿವರು, ಕಳೆದ ನಾಲ್ಕು ತಿಂಗಳಿಂದ ನಾವು ಹಗಲು - ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಆದರೂ ಮಾಧ್ಯಮಗಳಲ್ಲಿ ನಮ್ಮ ವಿರುದ್ಧ ವರದಿಗಳು ಬರುತ್ತಿವೆ. ಅದಕ್ಕೆ ಇಂತಹ ಲೋಪಗಳು ಕಾರಣ ಎಂದರು.

ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದ್ದು ಅದು ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕಟುಕರಂತೆ ವರ್ತಿಸಬಾರದು. ಜನರು ಚಿಕಿತ್ಸೆಗಾಗಿ ರಸ್ತೆ ರಸ್ತೆಗಳಲ್ಲಿ ಅಲೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಎಲ್ಲರೂ ಹೃದಯ ವೈಶಾಲ್ಯತೆ ಮೆರೆಯಬೇಕು ಸಚಿವರು ಹೇಳಿದರು. ನಗರದಲ್ಲಿ ಇದ್ದುಕೊಂಡು ಮಾರ್ಗಸೂಚಿ ಪಾಲಿಸದೆ ಹಾಸಿಗೆಗಳನ್ನು ಸರಿಯಾದ ರೋಗಿಗಳಿಗೆ ಒದಗಿಸದ ಕಾರಣಕ್ಕೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತ್ತಿನಲ್ಲಿ ಇರಿಸುವಂತೆ ಸ್ಥಳದಿಂದಲೇ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದರು.

ಅನಸ್ತೇಷಿಯಾ ವಿಭಾಗದಲ್ಲಿ ಆರು ಮಂದಿ ತಜ್ಞರು ಇದ್ದರೂ ಇನ್ನೂ ವೆಂಟಿಲೇಟರ್ ಅಳವಡಿಕೆ ಆಗಿಲ್ಲ. ಹೀಗಿರುವಾಗ ಅಗತ್ಯ ಇರುವ ಬೇರೆ ಆಸ್ಪತ್ರೆಗೆ ಏಕೆ ತಜ್ಞರನ್ನು ನಿಯೋಜಿಸಲಿಲ್ಲ ಎಂದೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ರೋಗಿಗಳ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಆಸ್ಪತ್ರೆಯಲ್ಲಿ ಒದಗಿಸಿರುವ ಸೌಲಭ್ಯ ಮತ್ತು ಚಿಕಿತ್ಸೆಯ ಬಗ್ಗೆ ವಿಚಾರಿಸಿಕೊಂಡರು. ವೈದ್ಯಕೀಯ ಅಧೀಕ್ಷಕರಾದ ರಾಧಾಕೃಷ್ಣ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. 

ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಅನಿರೀಕ್ಷಿತ ಭೇಟಿ ಕಾರ್ಯಕ್ರಮ ಮುಂದುವರಿಯುತ್ತದೆ. ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲು ಎಲ್ಲಾ ಲ್ಯಾಬ್ ಗಳ ಜತೆ ಖುದ್ದು ಮಾತನಾಡಿ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ಲಾಸ್ಮಾ ಚಿಕಿತ್ಸೆ ನಮ್ಮಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಗುಣಮುಖ ರಾದವರಿಗೆ ರಕ್ತದಾನ ಮಾಡಲು ಮನವಿ ಮಾಡಲಾಗಿದೆ. ಇದಕ್ಕಾಗಿ ದಾನಿಗಳಿಗೆ ಪ್ರೋತ್ಸಾಹ ಧನವಾಗಿ ಐದು ಸಾವಿರ ರೂ.ಗಳನ್ನು ನೀಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com