ಮಂಡ್ಯ; ತಮಿಳು ನಾಡಿಗೆ ನೀರು ಬಿಡುಗಡೆ, ಮೈದುಂಬಿ ಹರಿಯುತ್ತಿರುವ ಕಾವೇರಿ ಕಂಡು ರೈತರ ಮೊಗದಲ್ಲಿ ಸಂತಸ 

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಕೆಆರ್ ಎಸ್ ಅಣೆಕಟ್ಟೆಯಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಕೆಆರ್ ಎಸ್ ಜಲಾಶಯ
ಕೆಆರ್ ಎಸ್ ಜಲಾಶಯ

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಕೆಆರ್ ಎಸ್ ಅಣೆಕಟ್ಟೆಯಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈ ಮಾಹೆಯಲ್ಲಿ 31.3 ಟಿಎಂಸಿ ಅಡಿ ನೀರನ್ನು ಹರಿಸಬೇಕು,ಅಂತೆಯೇ ನಿತ್ಯ 3,500 ಕ್ಯುಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರೂಪಿಸಿರುವ ಅಂತರ್ ರಾಜ್ಯ ಸೆಲ್ ಗಳ ಅಧಿಕಾರಿಗಳ ಸೂಚನೆಯಂತೆಯೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ರೈತರ ಮೊಗದಲ್ಲಿ ಸಂತಸ: ಜಿಲ್ಲೆಯ ಜೀವನಾಡಿ ಕಾವೇರಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.ಕಳೆದ ವಾರದಿಂದೀಚೆಗೆ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಕೆ.ಆರ್.ಎಸ್ ಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು ಕಳೆದ ನಾಲ್ಕೈದು ದಿನಗಳಿಂದ  ಅಣೆ ಕಟ್ಟೆಗೆ ಹರಿದು ಬರುತ್ತಿರುವ ಒಳ ಹರಿವು ಹೆಚ್ಚಾಗಿದೆ. 

ಅಣೆಕಟ್ಟೆಯಲ್ಲಿ ಪ್ರಸ್ತುತ 107 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 90.03 ಅಡಿ ನೀರು ಇತ್ತು. ಅಲ್ಲದೇ 995 ಕ್ಯೂಸೆಕ್ ಒಳ ಹರಿವು ಇತ್ತು.ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಇಂದಿನ ಒಳ ಹರಿವು 14,620 ಕ್ಯೂಸೆಕ್ ಇದ್ದು,ಹೊರ ಹರಿವು 4,655 ಕ್ಯೂಸೆಕ್ ಇದೆ.ಜೊತೆಗೆ ನೀರಿನ ಸಂಗ್ರಹ 28.810 ಟಿಎಂಸಿ ಇದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com