ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್ಐ ಆತ್ಮಹತ್ಯೆ; ತನಿಖೆಗೆ ಮಾಜಿ ಪ್ರಧಾನಿ ಒತ್ತಾಯ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ -ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಎಸ್‌ಐ ಕಿರಣ್ ಕುಮಾರ್
ಪಿಎಸ್‌ಐ ಕಿರಣ್ ಕುಮಾರ್

ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ -ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲೆ ಪ್ರಕರಣವೊಂದನ್ನು ನಿನ್ನೆ ಮಧ್ಯ ರಾತ್ರಿಯಷ್ಟೇ ಭೇದಿಸಿದ್ದ ಅವರು, ಆರೋಪಿ‌ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ‌ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಿರಣ್ ಕುಮಾರ್ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವರು. ವರಮಹಾಲಕ್ಷ್ಮಿ ಹಬ್ಬ ಇದ್ದುದರಿಂದ ಪತ್ನಿ ತನ್ನ ತಂದೆ ಮನೆಗೆ ಹೋಗಿದ್ದರು. ಕಿರಣ್ ಕೂಡ ಮಾವನ ಮನೆಗೆ ಹೋಗಿ ಬೆಳಿಗ್ಗೆ ಉಪಹಾರ ಸೇವಿಸಿ ಬಂದು ತಾವು ವಾಸವಿದ್ದ ಮನೆಯಲ್ಲಿ ಪ್ಯಾನ್ ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ 

ಆತ್ಮಹತ್ಯೆಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೆ ಎರಡು ದಿನಗಳ ಹಿಂದೆ ನಡೆದಿದ್ದ ಕೊಲೆಗಳಿಗೂ ಪಿಎಸ್ ಐ ಆತ್ಮಹತ್ಯೆಗೂ ಸಂಬಂಧವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ನಿನ್ನೆ, ಮೊನ್ನೆ ಎರಡು ದಿನ ಚನ್ನರಾಯಪಟ್ಟಣದಲ್ಲಿ ಇಬ್ಬರ ಹತ್ಯೆಯಾಗಿತ್ತು.

ಕಳೆದ ಎರಡು ದಿನಗಳಿಂದಲೂ ಕಿರಣ್ ಅವರು ಈ ಕೊಲೆಗಳ ಜಾಡು ಹಿಡಿದಿದ್ದರು. ಆದರೆ ಚನ್ನರಾಯಪಟ್ಟಣದ ಕೆಲವು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಸಂದೇಶ ಹರಿಬಿಡಲಾಗಿತ್ತು. ಈ ಕುರಿತು ಅಸಮಾಧಾನಗೊಂಡಿದ್ದ ಕಿರಣ್ ಕುಮಾರ್, ತಮ್ಮನ್ನು ಅಮಾನತು ಮಾಡಬಹುದು ಎಂದು ಸಹೋದ್ಯೋಗಿ ಯೊಬ್ಬರಿಗೆ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

ತನಿಖೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯ:
ಪಿಎಸ್ ಐ ಕಿರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಅವರಿಗೆ ಹಿಂಸೆ ಕೊಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಗೃಹ ಸಚಿವರು ಇದರ ಬಗ್ಗೆ ಸೂಕ್ತ ತನಿಖೆ ಮಾಡಬೇಕು‌. ಇದನ್ನು ಸರ್ಕಾರ ಸರಿಯಾದ ತನಿಖೆ ಮಾಡದೆ ಹೋದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಗೃಹ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com