ಉಡುಪಿ: ಸಾಮಾಜಿಕ ಅಂತರವನ್ನೂ ಮರೆತು ಕ್ವಾರಂಟೈನ್ ಕೇಂದ್ರದಲ್ಲೇ ಬಿಜೆಪಿ ಮುಖಂಡರಿಂದ ಬರ್ತಡೇ ಪಾರ್ಟಿ!

ಕ್ವಾರಂಟೈನ್ ಕೇಂದ್ರದಲ್ಲೇ ಸಾಮಾಜಿಕ ಅಂತರವನ್ನೂ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ವರದಿಯಾಗಿದೆ.

Published: 04th June 2020 12:58 PM  |   Last Updated: 04th June 2020 01:02 PM   |  A+A-


ಕ್ವಾರಂಟೈನ್ ಕೇಂದ್ರದಲ್ಲೇ ಬಿಜೆಪಿ ಮುಖಂಡರಿಂದ ಬರ್ತಡೇ ಪಾರ್ಟಿ!

Posted By : Raghavendra Adiga
Source : Online Desk

ಉಡುಪಿ: ಕ್ವಾರಂಟೈನ್ ಕೇಂದ್ರದಲ್ಲೇ ಸಾಮಾಜಿಕ ಅಂತರವನ್ನೂ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ವರದಿಯಾಗಿದೆ. ಕಾರ್ಕಳದ ಮುರತಗಡಿ ಪ್ರಕೃತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದ್ದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಕಾರ್ಯಕರ್ತರು ಇಲ್ಲಿಯೇ ಒಟ್ಟಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಪಕ್ಷದ ಕಾರ್ಯಕರ್ತನೊಬ್ಬನ ಜನ್ಮದಿನೋತ್ಸವ ಮಾಡಿದ್ದಾರೆ. ಸಾಮಾಜಿಕ ಅಂತರವನ್ನೂ ಲೆಕ್ಕಿಸದೆ ಕ್ವಾರಂಟೈನ್ ಕೇಂದ್ರದಲ್ಲೇ ಜನ್ಮದಿನ ಆಚರಣೆ ಮಾಡಿರುವುದು ವಿವಾದಾಸ್ಪದವಾಗಿದ್ದು ಇದೀಗ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದೆ.

ಕ್ವಾರಂಟೈನ್ ಕೇಂದ್ರಗಳನ್ನು ಆಡಳಿತ ಪಕ್ಷದ ಪ್ರಚಾರ ಕೇಂದ್ರಗಳಾಗಿ  ಪರಿವರ್ತಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮತ್ತು ಸ್ಥಳೀಯ ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ಹುಟ್ಟುಹಬ್ಬದ ಆಚರಣೆಯು ಆ ಪ್ರದೇಶದಲ್ಲಿ ಕೊರೋನಾವೈರಸ್ ಹರಡುವ ಭೀತಿ ಹುಟ್ಟು ಹಾಕಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮತ್ತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಆಯೋಜಿಸಲಾದ ಹುಟ್ಟುಹಬ್ಬದ ಆಚರಣೆಯ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಕಾರ್ಯಕ್ರಮ ನಡೆದಿರುವುದು  ಮೇ 22ರಂದು ಇದೀಗ ವಿಡಿಯೋಗಳು ವೈರಲ್ ಆದ ನಂತರ ತಡವಾಗಿ ಬೆಳಕಿಗೆ ಬಂದಿದೆ. ಕೇಕ್ ಕತ್ತರಿಸುವಾಗ ಮತ್ತು ಒಬ್ಬರಿಗೊಬ್ಬರು ಕೇಕ್ ತುಂಡುಗಳನ್ನು ತಿನ್ನುವಾಗ ಜನರು ಪರಸ್ಪರ ಹತ್ತಿರ ನಿಂತಿರುವುದನ್ನು ವೀಡಿಯೊ ದಲ್ಲಿ ಕಾಣಬಹುದಾಗಿದೆ. ಈ ದೃಶ್ಯಗಳು ಜನರನ್ನು ಆತಂಕಕ್ಕೆ ತಳ್ಳಿದ್ದು ಘಟನೆಯು ಈ ಪ್ರದೇಶದಲ್ಲಿ ಕೊರೋನಾ ಹರಡಲು ಕಾರಣವಾಗಲಿದೆ ಎನ್ನುವ ಭೀತಿ ಹುಟ್ಟಿಸಿದೆ.

ಕಡ್ಡಾಯವಾದ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ಅನೇಕರಿಗೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಮಧ್ಯೆ ಈ ಘಟನೆ ನಡೆದಿದೆ. ಇದೀಗ ನಿಯಮಬಾಹಿರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಹಾಗೂ ಕಾರ್ಯಕ್ರಮ ಆಯೋಜಿಸಿದ್ದವರ ವಿರುದ್ಧ  ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp