ದೇವರಾಜು ಅರಸು ಪುಣ್ಯಸ್ಮರಣೆ: ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರ ಗೌರವ ನಮನ

ರಾಜ್ಯದ ಮುಖ್ಯಮಂತ್ರಿಯಾಗಿ, ದೂರದೃಷ್ಟಿಯುಳ್ಳ ನಾಯಕರಾಗಿ ಮಾನವೀಯ ತುಡಿತವಿರುವ ಆಡಳಿತಗಾರರಾಗಿ ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಕೈಗೊಂಡ ನಿರ್ಧಾರಗಳು ಚರಿತ್ರಾರ್ಹವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Published: 06th June 2020 03:08 PM  |   Last Updated: 06th June 2020 03:08 PM   |  A+A-


cm-urs

ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ

Posted By : Lingaraj Badiger
Source : UNI

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ, ದೂರದೃಷ್ಟಿಯುಳ್ಳ ನಾಯಕರಾಗಿ ಮಾನವೀಯ ತುಡಿತವಿರುವ ಆಡಳಿತಗಾರರಾಗಿ ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಕೈಗೊಂಡ ನಿರ್ಧಾರಗಳು ಚರಿತ್ರಾರ್ಹವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇಂದು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 38ನೇ ಪುಣ್ಯ ಸ್ಮರಣೆ ಪ್ರಮುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಅರಸು ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ, ಜೀತಮುಕ್ತಿ ಕಾಯ್ದೆ, ಋಣಪರಿಹಾರ ಕಾಯ್ದೆಯಂತಹ ಕ್ರಾಂತಿಕಾರಿ ನಿರ್ಧಾರಗಳು ಬಡವರು, ತಳಸಮುದಾಯದವರು, ಕೃಷಿ ಕಾರ್ಮಿಕರು ಸ್ವಾಭಿಮಾನದ ಬದುಕು ಸಾಧಿಸಲು ನೆರವಾದವು. ಸಾಮಾಜಿಕ ನ್ಯಾಯದ ಹರಿಕಾರ ಎಂಬ ಖ್ಯಾತಿಗೆ ಪಾತ್ರರಾದ ಅರಸು ಅವರು, ರಾಜ್ಯದ ಅಸಂಖ್ಯಾತ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು. ಹಾವನೂರು ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರಕಿಸಿಕೊಟ್ಟ ದೇವರಾಜು ಅರಸು ಅವರ ಸಾಧನೆಗೆ ಸಾಟಿಯಿಲ್ಲ ಎಂದು ಬಣ್ಣಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಜಾರಿಗೊಳಿಸಿದ್ದ 20 ಅಂಶಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಿದರು. ಶೋಷಿತರು ಮತ್ತು ಹಿಂದುಳಿದ ಜನಾಂಗಕ್ಕೆ ಶಕ್ತಿ ತುಂಬುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲಬೇಕು. ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ಸಮಾಜದ ದುರ್ಬಲ ವರ್ಗಕ್ಕೆ ಮಾಸಾಶನ ಮೂಲಕ ಬದುಕಿಗೆ ಭದ್ರತೆ, ನಿರುದ್ಯೋಗ ಭತ್ಯೆಯ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕಿನ ಭರವಸೆಯನ್ನು ಮೂಡಿಸಿದ ಕಾರ್ಯಕ್ರಮ ದೇಶದಲ್ಲಿಯೇ ವಿನೂತನವಾಗಿದೆ ಎಂದರು.

ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದು, ಅಂದಿನ ಮಟ್ಟಿಗೆ ವಿನೂತನವೆನಿಸಿದ್ದ ತೀರ್ಮಾನವಾಗಿತ್ತು. ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಮಹಾನ್ ನಾಯಕ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆದು ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಶ್ರೀರಾಮುಲು, ಬೈರತಿ ಬಸವರಾಜು, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಸಿಯೊಂದನ್ನು ನೆಟ್ಟು ನೀರೆರಲಾಯಿತು.

ಗಣ್ಯರ ಗೌರವ ನಮನ:
ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ನಾಯಕ ಡಿ.ದೇವರಾಜ ಅರಸು ಅವರ 38ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಗೌರನ ನಮನ ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಸಾಮಾಜಿಕ ನ್ಯಾಯದ ಹಳಿಯ ಮೇಲೆ ಅಭಿವೃದ್ಧಿಯ ಬಂಡಿಯನ್ನು ಓಡಿಸುವ ಹೊಸ ಅಭಿವೃದ್ಧಿ ಮಾದರಿಯ‌ ಮೂಲಕವೇ ನಾಡು ಕಟ್ಟಿದ ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ನಾಯಕ ಡಿ.ದೇವರಾಜ ಅರಸು ನಮ್ಮೆಲ್ಲರ‌ ಆದರ್ಶ. ಈ ಪರಿವರ್ತನೆಯ ಹರಿಕಾರನಿಗೆ ಪುಣ್ಯಸ್ಮರಣೆಯ ದಿನದ ಗೌರವಪೂರ್ವಕ ನಮನ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ತಿಳಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ಮೂಲಕ ಸಂಚಲನ ಮೂಡಿಸಿದ ಧೀಮಂತ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರು ನಾಡಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ನಮಿಸೋಣ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಸಾಮಾಜಿಕ ಸಮಾನತೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಪುಣ್ಯತಿಥಿಯಂದು ನನ್ನ ಗೌರವ ನಮನಗಳು. ಭೂ ಸುಧಾರಣೆ, ಶೋಷಿತ ವರ್ಗದ ಏಳಿಗೆಗಾಗಿ ವಿಶೇಷ ಕಾಳಜಿ ತೋರಿ, ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಧೀಮಂತ ನಾಯಕನ ಸತ್ಕಾರ್ಯಗಳನ್ನು ಸ್ಮರಿಸೋಣ ಎಂದು ತಿಳಿಸಿದ್ದಾರೆ.

ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟ್ವೀಟ್ ಮಾಡಿ, ಹಿಂದುಳಿದ ವರ್ಗಗಳ ಹರಿಕಾರ, ಸೋಷಿತ ವರ್ಗಗಳ ದನಿಯಾಗಿದ್ದ, ರಾಜ್ಯದಲ್ಲಿ ಭೂಸುಧಾರಣೆ ಸೇರಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪುಣ್ಯತಿಥಿ ಇಂದು. ಅವರ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಜನನಾಯಕ, ಬಡವರ ಧ್ವನಿ, 'ಹಿಂದುಳಿದ ವರ್ಗಗಳ ಹರಿಕಾರ' ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ್ ಅರಸ್ ಅವರ ಪುಣ್ಯತಿಥಿಯಂದು ಸಾಮಾಜಿಕ ನ್ಯಾಯದ ಆ ಹಿರಿಯ ಪ್ರತಿಪಾದಕರಿಗೆ ಶತಶತ ಪ್ರಣಾಮಗಳು. ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಜಾರಿಗೆ ತಂದ ಸುಧಾರಣೆಗಳು ಸಾಮಾಜಿಕ ಬದಲಾವಣೆಗಳಿಗೆ ನಾಂದಿ ಹಾಡಿದೆ ಎಂದು ತಿಳಿಸಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ನನ್ನ ಶತ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp