ಮಂಡ್ಯ: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸಾವು 

ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಸೆಸ್ಕ್ ಲೈನ್ಮ್ಯಾನ್ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಬಳಿ ಮಂಗಳವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಸೆಸ್ಕ್ ಲೈನ್ಮ್ಯಾನ್ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಬಳಿ ಮಂಗಳವಾರ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೊಕಿನ ಚೀಣ್ಯ ಬಳಿಯ ಭೂಸಂದ್ರ ಗ್ರಾಮದ ನಿವಾಸಿ ಪಾಮಡವಪುರ ಸೆಸ್ಕ್ನ ಚಿನಕುರಳಿಯ ಶಾಖೆಯ ಲೈನ್ಮ್ಯಾನ್ ಬಿ.ಎ.ಲೋಕೇಶ್ (೩೦) ಎಂಬಾತ ವಿದ್ಯುತ್ ಶಾಕ್ ನಿಂದ ಮೃತಪಟ್ಟ ವ್ಯಕ್ತಿಯಾಗಿದ್ದು, ನಾಗಮಂಗಲ ತಾಲ್ಲೊಕಿನ ದೊಡ್ಡಬೋಗನಹಳ್ಳಿ ಗ್ರಾಮದ ದಿನೇಶ್ (೨೪) ಎಂಬಾತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ
ಸೆಸ್ಕ್ ಇಲಾಖೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮೃತ ವ್ಯಕ್ತಿ ಮಂಗಳವಾರ ಬೆಳಗ್ಗೆ ೧೧ರ ಸಮಯದಲ್ಲಿ ಹೊನಗಾನಹಳ್ಳಿ ಗಾಮದ ಬಳಿಯ ವಿದ್ಯುತ್ ಪರಿವರ್ತಕ ದುರಸ್ಥಿಗೆ ತೆರಳಿದ್ದಾರೆ. ಈ ವೇಳೆ ವಿದ್ಯುತ್ ಹರಿವನ್ನು ಸ್ತಗಿತಗೊಳಿಸಲಾಗಿತ್ತು. ವಿದ್ಯುತ್ ಕಂಬವೇರಿ ಪರಿವರ್ತಕವನ್ನು ಪರಿಶೀಲಿಸುವ ವೇಳೆ ತಂತಿಯಲ್ಲಿ ವಿದ್ಯುತ್ ಪ್ರಹರಿಸಿದ ಪರಿಣಾಮ ಲೈನ್ಮ್ಯಾನ್ ಕಂಬದಲ್ಲಿ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಈತನಿಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯುತ್ ಗುತ್ತಿಗೆದಾರ ನೌಕರ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ, ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಮತ್ತು ಕುಟುಂಬ ವರ್ಗದವರ ಆಕ್ರೋಶ
ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಘಟನೆ ಸಂಭವಿಸಿದ್ದು, ವಿದ್ಯುತ್ ಲೈನ್ ದುರಸ್ತಿಗಾಗಿ ತೆರಳುತ್ತಿರುವುದಾಗಿ ಕಚೇರಿಯ ಅಧಿಕಾರಿಗಳಿಗೆ ತಿಳಿಸಿ ತೆರಳಿದ್ದರು. ಆದರೂ ಲೈನ್ ನಲ್ಲಿ ವಿದ್ಯುತ್ ಪ್ರಹರಿಸಿದೆ. ಇದಕ್ಕೆ ಸೆಸ್ಕ್ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಗ್ರಾಮಸ್ಥರು ಮತ್ತು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com