ಬೆಂಗಳೂರು: ದರೋಡೆಗೆ ಸಂಚು, ಐದು ಮಂದಿ ರೌಡಿಗಳು ಸಿಸಿಬಿ ಬಲೆಗೆ

 ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಐವರು ರೌಡಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಐವರು ರೌಡಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸಾರಾಯಿಪಾಳ್ಯ ನಿವಾಸಿ ಸಾದಿಕ್ (30), ಸಾರಾಯಿಪಾಳ್ಯ ಲಕ್ಷ್ಮೀ ಮೆಡಿಕಲ್ ಪಕ್ಕ ನಿವಾಸಿ ಮುಬಾರಕ್‌ (35), ಎಚ್‌ಬಿಆರ್ ಬಡಾವಣೆಯ 5ನೇ ಕ್ರಾಸ್ ನಿವಾಸಿ ಸಯ್ಯದ್ ಹನೀಫ್ ಅಲಿಯಾಸ್ ಡಾನ್‌ (25), ಸಾರಾಯಿಪಾಳ್ಯ, ಅಲ್ ಕಲೀಂ ಮಸೀದಿಯ ಹಿಂಭಾಗ ನಿವಾಸಿ ಮುಹಮ್ಮದ್ ಇಮ್ರಾನ್ ಅಲಿಯಾಸ್ ಲಾರಿ ಇಮ್ರಾನ್ (28), ಎಚ್‌ಬಿಆರ್ ಲೇಔಟ್‌ನ ಶಾಂಪುರ ಮೈನ್ ರೋಡ್‌ 2ನೇ ಕ್ರಾಸ್ ನಿವಾಸಿ ಅಕ್ರಮ್ ಪಾಶಾ (29) ಬಂಧಿತ ಆರೋಪಿಗಳು.

ಆರೋಪಿಗಳಿಂದ ಒಂದು ಕಬ್ಬಿಣದ ಕತ್ತಿ, ಒಂದು ಕಬ್ಬಿಣದ ಮಡಚುವ ಚಾಕು, ಮರದ ದೊಣ್ಣೆ, ಎರಡು ಖಾರದ ಪುಡಿ ಪೊಟ್ಟಣ, ನಾಲ್ಕು ದ್ವಿಚಕ್ರ ವಾಹನಗಳನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಆರೋಪಿ ಸಾದಿಕ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಕೊತ್ತನೂರು, ಹೆಣ್ಣೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆಯತ್ನ, ಸುಲಿಗೆ, ಹಲ್ಲೆ ಸೇರಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ ಮುಬಾರಕ್‌ ಕೂಡ ಸಂಪಿಗೆಹಳ್ಳಿ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಯತ್ನ ಸೇರಿ 6 ಪ್ರಕರಣ ದಾಖಲಾಗಿವೆ. ನಂದಿನಿ ಲೇಔಟ್‌ ಠಾಣೆಯ ಕೊಲೆಯತ್ನ ಮತ್ತು ಜೆ.ಜೆ.ನಗರ ಪೊಲೀಸ್ ಠಾಣೆಯ ದರೋಡೆ ಯತ್ನ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ.

ಆರೋಪಿ ಸಯ್ಯದ್ ಹನೀಫ್ ಕೂಡ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ, ಕೊಲೆಯತ್ನ, ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಮುಹಮ್ಮದ್ ಇಮ್ರಾನ್ ವಿರುದ್ಧ ರಾಜಾನುಗುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ನೆಲಮಂಗಲದಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ.

ಅಕ್ರಮ್ ಪಾಷ ವಿರುದ್ಧ ಹೆಣ್ಣೂರು ಮತ್ತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು, ಚಿನ್ನದ ಆಭರಣಗಳನ್ನು ದೋಚಲು ಸಂಚು ರೂಪಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಈ ತಂಡದ ಬಂಧನದಿಂದ ಎಚ್‌ಎಎಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಸುಲಿಗೆ ಪ್ರಕರಣ, ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಗಳಿಂದ ಹೊರಡಿಸಿರುವ ದಸ್ತಗಿರಿ ವಾರಂಟ್‌ಗಳು, ಜಾರಿಗೆ ಬಾಕಿ ಇರುತ್ತವೆ. ಈ ಆರೋಪಿಗಳ ವಿರುದ್ಧ ಎಚ್‌ಎಎಲ್‌ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com