ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ- ಮುರುಗೇಶ್ ನಿರಾಣಿ ಸ್ಪಷ್ಟನೆ

ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡವುದಕ್ಕಾಗಲೀ ಅಥವಾ ಓ&ಎಂ (ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗೆ) ನೀಡುವುದಕ್ಕಾಗಲೀ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರಕೈಗೊಂಡಿಲ್ಲ.ಹೀಗಾಗಿ ಮೈಷುಗರ್ ರ್ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ನಿರಾಣಿ ಶುಗರ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಸ್
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡವುದಕ್ಕಾಗಲೀ ಅಥವಾ ಓ&ಎಂ (ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗೆ) ನೀಡುವುದಕ್ಕಾಗಲೀ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರಕೈಗೊಂಡಿಲ್ಲ.ಹೀಗಾಗಿ ಮೈಷುಗರ್ ರ್ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ನಿರಾಣಿ ಶುಗರ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯಸರ್ಕಾರ , ಬೇಕಾದವರಿಗೆ ಮೈಷಗರ್ ಕಾರ್ಖಾನೆಯನ್ನು  ನೀಡಲು ಅದು ಕಿರಾಣಿ ಅಂಗಡಿಯಲ್ಲ. ಯಾವುದೇ ಕಾರ್ಖಾನೆ ಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಬೇಕಾದರೆ ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ಟೆಂಡರ್ ನಿಯಮಾನುಸಾರ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆಯ ನ್ನಾಧರಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲಾಗುತ್ತದೆ.ಈ ಸಾಮಾನ್ಯ ಮಾಹಿತಿಯು ನನ್ನ ಮೇಲೆ ನಿರಾಧಾರ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ರಾಜ್ಯಸರ್ಕಾರ ಟೆಂಡರ್ ಅಧಿಸೂಚಿಸಿದರೆ ಅಂದು ನನಗೆ ಅರ್ಹತೆ ಮತ್ತು ಆಸಕ್ತಿ ಇದ್ದರೆ  ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿರುವ ಅವರು,ಮೈಷುಗರ್ ಕಾರ್ಖಾನೆ ಕಳೆದ ನಾಲ್ಕು ವರ್ಷಗಳಿಂದ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ಕೆಲವೇ ತಿಂಗಳುಗಳು ಕಾರ್ಖಾನೆ ಕಬ್ಬು ಅರೆದಿದೆ ಅಷ್ಟೆ. ಇಂತಹ ರೋಗಗ್ರಸ್ತ ಕಾರ್ಖಾನೆಯನ್ನು ರೋಗಗ್ರಸ್ತವಾಗಿಯೇ ಮುಂದುವರೆಯಲು ಬಿಡಬೇಕೋ ಅಥವಾ ಕಾರ್ಖಾನೆ ಪೂರ್ಣಪ್ರಮಾಣದಲ್ಲಿ ಕಬ್ಬು ಅರೆಯಲು ಆರಂಭಿಸಬೇಕೋ ಎಂಬುದನ್ನು ರಾಜ್ಯ ಸರ್ಕಾರ, ಮಂಡ್ಯಜಿಲ್ಲೆಯ ಜನಪ್ರತಿನಿಧಿಗಳು, ರೈತ ಹಿತರಕ್ಷಣಾ ಹೋರಾಟ ಸಮಿತಿಗಳು, ವಿವಿಧ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ನಿರ್ಧರಿಸುವ ಕಾಲ ಸನ್ನಿಹಿತವಾಗಿದೆ.ಮೈಷುಗರ್ ಕಾರ್ಖಾನೆ ಜೊತೆ ನನ್ನ ಹೆಸರನ್ನು ತಳುಕುಹಾಕುವುದು ಬೇಡ ಎಂದು ಅವರು ವಿನಂತಿಸಿದ್ದಾರೆ.

ಕೆ.ಆರ್.ಎಸ್ ಜಲಾಶಯಕ್ಕಿಂತ ಆಲಮಟ್ಟಿ ಜಲಾಶಯ ತುಂಬಾ ದೊಡ್ಡದು, ನಾನು ನಮ್ಮ ಭಾಗದಲ್ಲಿಯೇ ಇನ್ನೂ ನಾಲ್ಕೈದು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅವಕಾಶವಿದೆ.ಹೀಗಾಗಿ ಮಂಡ್ಯದಲ್ಲಿನ ಕಾರ್ಖಾನೆಗಳನ್ನೇ ನಡೆಸಬೇಕೆಂಬ ಹಠವಾಗಲೀ, ಯಾವುದೇ ಹಿತಾಸಕ್ತಿಯಾಗಲೀ ನನಗಿಲ್ಲ.ನಾನು ಯಶಸ್ವಿ ಉದ್ಯಮಿಯಾಗಿದ್ದು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆ ನೀಡಿದ್ದೇನೆ. ನಾನು ಮಹಾನ್ ಲೂಟಿ ಕೋರನೂ ಅಲ್ಲ, ಕಳ್ಳತನವನ್ನು ಮಾಡುವ ಅಗತ್ಯವೂ ನನಗಿಲ್ಲ. ಇದೇ ರೀತಿಯ ನಿರಾಧಾರ ಆರೋಪಗಳನ್ನು ನನ್ನ ಮೇಲೆ ವಿನಾಕಾರಣ ಮಾಡಿದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನಾನು ೬ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಹೊಂದಿದ್ದು, ಪ್ರತಿದಿನ ೫೦ಸಾವಿರ ಟನ್ ಕಬ್ಬನ್ನು  ಅರೆದು,೨೦೦ ಮೆಗಾವ್ಯಾಟ್ ವಿದ್ಯುತ್, ೮ಲಕ್ಷ ಇಥೆನಾಲ್, ೪೦೦ಮೆಟ್ರಿಕ್ ಟನ್ ಸಿಓ೨ ಮತ್ತು ಸಿಎನ್‌ಜಿ ಉತ್ಪಾದಿಸುತ್ತಿದ್ದೇನೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಕ್ಕರೆ, ಇಥೆನಾಲ್,ವಿದ್ಯುತ್ ಉತ್ಪಾದಿಸುವ ದಾಖಲೆ ಹೊಂದಿದ್ದೇನೆ. ಅತೀ ಶೀಘ್ರದಲ್ಲಿ ಜೆಟ್‌ಫ್ಯೂಯಲ್ ವಿಮಾನಗಳಿಗೆ ಇಥೆನಾಲ್ ಒದಗಿಸುವ ಪ್ರಯತ್ನದಲ್ಲಿದ್ದೇನೆ. ಇಷ್ಟು ಸಾಧನೆಗಳನ್ನು ಮಾಡಿರುವ ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡುವವರಿಗೆ ಹಾಗೂ ಹಗುರವಾಗಿ ಮಾತನಾಡುವವರಿಗೆ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

೨೦೧೯-೨೦ನೇ ಸಾಲಿನ ಕಬ್ಬಿನ ಹಣ ಪಾವತಿ ಬಾಕಿ ೨೨ಕೋಟಿ ಇದ್ದು,ಒಂದು ವಾರದಲ್ಲಿ ಕಬ್ಬು ಬೆಳೆಗಾರರಿಗೆ ಪಾವತಿಸುತ್ತೇನೆ, ಒಟ್ಟಾರೆ ನನ್ನ ಸಕ್ಕರೆ ಕಾರ್ಖಾನೆಗಳ ಪೂರ್ಣ ವಹಿವಾಟಿನ ಶೇ. ೯೮ರಷ್ಟು ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸಿದ್ದೇನೆ.ಒಟ್ಟು ೩ಸಾವಿರ ಕೋಟಿ ವಹಿವಾಟಿನಲ್ಲಿ ಕೇವಲ ೨೨ಕೋಟಿ ಬಾಕಿ ಇದೆ ಎಂಬುದನ್ನು ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದಿದ್ದಾರೆ.

ನನಗೆ ರಾಜ್ಯ ಸರ್ಕಾರದಿಂದ ವಿದ್ಯುಚ್ಛಕ್ತಿ ಬಾಕಿ ಹಣ, ಕೇಂದ್ರ ಸರ್ಕಾರದಿಂದ ಸಕ್ಕರೆ ಸಬ್ಸಿಡಿ,ಇಥೆನಾಲ್ ಪೂರೈಕೆ ಹಾಗೂ ಕಬ್ಬು ಉತ್ಪನ್ನಗಳ ಮಾರಾಟದ ಬಾಕಿ ಹಣ ಸೇರಿದಂತೆ ಒಟ್ಟು ೧೫೦ಕೋಟಿಗೂ ಹೆಚ್ಚು ಬಾಕಿ ಹಣ ಬರಬೇಕಿದೆ. ಹೀಗಿದ್ದರೂ ಸಹ ನಾನು ರೈತರ ಹಣವನ್ನು ಪಾವತಿಸಿದ್ದೇನೆ. ಇದನ್ನು ಕಬ್ಬು ಬೆಳೆಗಾರರು ಹಾಗೂ ನನ್ನ ಮೇಲೆ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.

ಯದುವೀರ್ ಒಡೆಯರ್‌ರವರನ್ನು ನಾನು ಭೇಟಿ ಮಾಡಿಲ್ಲ , ಮೈಸೂರಿನ ಅರಮನೆಯಲ್ಲಿ, ಜೂನ್ ೧೦ ರಂದು ನಾನು ರಾಜಮಾತೆ ಪ್ರಮೋದಾದೇವಿ ಒಡೆಯರ್‌ರವರನ್ನು ಸೌಜನ್ಯದ ಭೇಟಿ ಮಾಡಿದ್ದೆನು.ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಪ್ರಜ್ಞಾವಂತರಿಗೆ ಶೋಭೆತರುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.

ಯದುವೀರ್ ಒಡೆಯರ್‌ರವರನ್ನು ನಾನು ಭೇಟಿಯೇ ಮಾಡಿಲ್ಲ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಷುಗರ್ ಕಾರ್ಖಾನೆಯನ್ನು ಓ&ಎಂ ವ್ಯವಸ್ಥೆಯಲ್ಲಾದರೂ ಆರಂಭಿಸುವಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಮನೆತನವನ್ನು ಈ ವಿಷಯದಲ್ಲಿ ಸೇರಿಸಿ ಹೇಳಿಕೆಗಳನ್ನು ನೀಡುವುದು ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಕಪೋಲ ಕಲ್ಪಿತ ಹೇಳಿಕೆಯನ್ನು ಕೊಡುವುದು ಸ್ವಾಭಿಮಾನಿ ಮಂಡ್ಯ ಜನತೆಯ ಘನತೆ ಗೌರವಕ್ಕೆ ಶೋಭೆ ತರುವ ವಿಷಯವಲ್ಲ ಎಂದಿದ್ದಾರೆ.

ನಾನೂ ಸಹ ಕರ್ನಾಟಕದವನೇ. ನಾನೇನು ಹೊರದೇಶದವನಲ್ಲ.ಅಥವಾ ಹೊರ ಜಿಲ್ಲೆಯವನಲ್ಲಾ. ಒಟ್ಟಾರೆಯಾಗಿ ಕಬ್ಬು ಬೆಳೆಗಾರರ ಹಿತ ರಕ್ಷಿಸುವುದೊಂದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಷ್ಠಿತ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಮೂರು ಬಾರಿ ಟೆಂಡರ್ ಅಧಿಸೂಚನೆ ಹೊರಡಿಸಿತ್ತು. ಮೂರು ಬಾರಿಯೂ ಯಾವುದೇ ಸಕ್ಕರೆ ಕಾರ್ಖಾನೆ ಮಾಲೀಕರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ನಾಲ್ಕನೇ ಬಾರಿ ಟೆಂಡರ್ ಅಧಿಸೂಚನೆ ಹೊರಡಿಸಿದಾಗ ನಿರಾಣಿ ಶುಗರ್ ಲಿಮಿಟೆಡ್ ೪೦೫ ಕೋಟಿಗೂ ಹೆಚ್ಚು ಬಿಡ್ ಸಲ್ಲಿಸಿತ್ತು. ರಾಜ್ಯ ಸರ್ಕಾರ ಮತ್ತು ಸಹಕಾರಿ ಕಾಯ್ದೆ ನಿಯಮಗಳ ಪ್ರಕಾರ, ಪಾರದರ್ಶಕ ನಿಯಮದಡಿ ೪೦ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಯಾವುದೇ ಪಕ್ಷಪಾತ ಅಥವಾ ನಿಯಮ ಬಾಹಿರ ನಡೆ ಇರುವುದಿಲ್ಲ ಎಂದಿದ್ದಾರೆ.

ಪ್ರತಿವಾರ ಕಬ್ಬು ಬೆಳೆಗಾರರಿಗೆ ಹಣ ಪಾವತಿಸುತ್ತೇನೆ. ಪಿಎಸ್‌ಎಸ್‌ಕೆಯ ನ್ನು ಇಡೀರಾಜ್ಯದಲ್ಲಿಯೇ ಮಾದರಿ ಕಾರ್ಖಾನೆಯನ್ನು ಮಾದರಿ ಕಾರ್ಖಾನೆಯನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇನೆ.ವಿದ್ಯುತ್ ಉತ್ಪಾದನೆ ಹಾಗೂ ಡಿಸ್ಟಿಲರಿ ಆರಂಬಿಸಿ ರೈತರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಹೆಚ್ಚು ಅನುಕೂಲ ಮಾಡಲು ಯೋಜನೆ ಸಿದ್ಧಪಡಿಸಿದ್ದೇನೆ.ಸಮರ್ಥವಾಗಿ ಮಂಡ್ಯದ ಪ್ರಜ್ಞಾವಂತ ಜನ ಇದನ್ನೆಲ್ಲ ಅರಿತು ಮಾತನಾಡಬೇಕು. ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಅಂತಹ ಅನಿವಾರ್ಯತೆಯೂ ನನಗೆ ಇಲ್ಲ. ಸಕ್ಕರೆ ಕ್ಷೇತ್ರದಲ್ಲಿ ನಾನು ನನ್ನದೇ ಸಾಮ್ರಾಜ್ಯವನ್ನು ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಾಪಸ್ಸೋಗಲು ಸಿದ್ದ,ನನಗೆ ನಷ್ಠವೇನಿಲ್ಲ;ಪಿಎಸ್‌ಎಸ್‌ಕೆಯನ್ನು ನಾನು ನಡೆಸುವುದು ಬೇಡ ಎಂದು ಒಕ್ಕೊರಲಿನಿಂದ ಎಲ್ಲರೂ ಹೇಳಿದರೆ ನಾನು ವಾಪಸ್ಸು ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

 ಪ್ರತಿದಿನ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡುವುದರ ಮೂಲಕಜನತೆಯನ್ನು ತಪ್ಪು ದಾರಿಗೆ ಎಳೆಯುವುದು ಹಾಗೂ ನನ್ನ ವರ್ಚಸ್ಸಿಗೆ ಮಸಿ ಬಳಿಯುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು, ರೈತ ಮುಖಂಡರು, ರೈತ ಹಿತರಕ್ಷಣ ಹೋರಾಟ ಸಮಿತಿ, ಜನ ಪ್ರತಿನಿಧಿಗಳು ಸಂಪೂರ್ಣ ಸಹಕಾರ ಕೊಟ್ಟರೆ ಮಾತ್ರ ಪಿಎಸ್‌ಎಸ್‌ಕೆ ಆರಂಭಿಸುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com