ಜಿಪಂ ಗದ್ದುಗೆ ಗುದ್ದಾಟ; ನಾಲ್ಕನೇ ಸಭೆಯೂ ರದ್ದು: ಮುಂದುವರೆದ ಸ್ವಪಕ್ಷೀಯ ಅಧ್ಯಕ್ಷೆ-ಸದಸ್ಯರ ನಡುವಿನ ಕಿತ್ತಾಟ 

ಜಿಪಂ.ಅಧ್ಯಕ್ಷಗಾದಿಗಾಗಿ ಹಾಲಿ ಅಧ್ಯಕ್ಷೆ ಹಾಗೂ ಆಡಳಿತಾರೂಢ ಜೆಡಿಎಸ್ ಸದಸ್ಯರ ನಡುವಿನ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ಬುಧವಾರದ ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕನೇ ಬಾರಿಯಸಭೆಯೂ ಸಹ ಕೋರಂ ಕೊರತೆ ಕಾರಣದಿಂದ ರದ್ದಾಗಿದೆ.
ಮಂಡ್ಯ (ಸಂಗ್ರಹ ಚಿತ್ರ)
ಮಂಡ್ಯ (ಸಂಗ್ರಹ ಚಿತ್ರ)

ಮಂಡ್ಯ: ಜಿಪಂ.ಅಧ್ಯಕ್ಷಗಾದಿಗಾಗಿ ಹಾಲಿ ಅಧ್ಯಕ್ಷೆ ಹಾಗೂ ಆಡಳಿತಾರೂಢ ಜೆಡಿಎಸ್ ಸದಸ್ಯರ ನಡುವಿನ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ಬುಧವಾರದ ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕನೇ ಬಾರಿಯಸಭೆಯೂ ಸಹ ಕೋರಂ ಕೊರತೆ ಕಾರಣದಿಂದ ರದ್ದಾಗಿದೆ.

ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆದಿದ್ದ ಬಜೆಟ್ ಮಂಡನೆ ಸಭೆಗೆ ಒಟ್ಟು 41 ಸದಸ್ಯರ ಪೈಕಿ ಕೋರಂಗೆ 29 ಸದಸ್ಯರು ಬೇಕಾಗಿತ್ತು. ಆದರೆ, ಹಾಜರಾಗಿದ್ದವರು 28 ಮಾತ್ರ. ಹಾಗಾಗಿ ಸಭೆ ರದ್ದಾಯಿತು. ಅಧ್ಯಕ್ಷೆ ನಾಗರತ್ನ ಅವರ ರಾಜೀನಾಮೆಗೆ ಪಟ್ಟುಹಿಡಿದಿರುವ ಸ್ವಪಕ್ಷೀಯ ಜೆಡಿಎಸ್ ಸದಸ್ಯರು ಗೈರುಹಾಜರಾಗುವ ಮೂಲಕ ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದು, ಸಾಮಾನ್ಯಸಭೆ ನಡೆಯುತ್ತಿಲ್ಲ. ನಾಲ್ಕನೇ ಸಭೆಗೆ ಕಾಂಗ್ರೆಸ್ ಸದಸ್ಯರು ಹಾಜರಿದ್ದರೂ ಅಗತ್ಯ ಕೋರಂ ಸಿಗಲಿಲ್ಲ. ಅಂತಿಮವಾಗಿ ಅಧ್ಯಕ್ಷೆ ನಾಗರತ್ನ ಸಭೆ ಮುಂದೂಡಿ ಹೊರನಡೆದರು.

ಜೆಡಿಎಸ್ ಸದಸ್ಯರು ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಅವರ ಕಚೇರಿಯಲ್ಲಿ ಠಿಕಾಣಿ ಹೂಡಿದ್ದರು. ಸದಸ್ಯ ಎನ್.ಶಿವಣ್ಣ ಅವರ ಸಲಹೆ ಮೇರೆಗೆ ಅಧ್ಯಕ್ಷೆ ನಾಗರತ್ನ ಜೆಡಿಎಸ್ ಸದಸ್ಯರ ಬಳಿಗೆ ತೆರಳಿ ಸಭೆಗೆ ಬರುವಂತೆ ಮನವಿ ಮಾಡಿದರು. ಆದರೆ, ಜೆಡಿಎಸ್ ಸದಸ್ಯರು ಸಭೆಗೆ ಬರಲಿಲ್ಲ. ಪರಿಸ್ಥಿತಿಯಿಂದ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು, ನಿಮ್ಮ ವಯಕ್ತಿಕ ರಾಜಕಾರಣವನ್ನು ಹೊರಗಿಟ್ಟುಕೊಳ್ಳಿ. ಹೀಗೆ ಸಭೆಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಅಧ್ಯಕ್ಷೆ ಹಾಗೂ ಜೆಡಿಎಸ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಜರುಗಿತು.

ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ತನ್ನ ಪತಿ ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದರಿಂದ ಜೆಡಿಎಸ್ನಿಂದ ಅಧ್ಯಕ್ಷರಾಗಿದ್ದ ನಾಗರತ್ನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಸದಸ್ಯರು ಪಟ್ಟುಹಿಡಿದಿದ್ದಾರೆ.
ಆದರೆ, ಇದಕ್ಕೆ ಸೊಪ್ಪು ಹಾಕದ ನಾಗರತ್ನ ಅವರು ಕಾನೂನುಬದ್ದವಾಗಿ ಅಧ್ಯಕ್ಷೆಯಾಗಿದ್ದೇನೆ. ನನ್ನ ಪತಿ ರಾಜಕಾರಣಕ್ಕೂ ಇದಕ್ಕೂ ಸಂಬAಧ ಇಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುವುದಿಲ್ಲವೆಂದು ಸೆಡ್ಡು ಹೊಡೆದಿದ್ದಾರೆ.ಇದರ ಪರಿಣಾಮ ನಾಗರತ್ನ ಅವರ ಅಧ್ಯಕ್ಷತೆಯ ಸಾಮಾನ್ಯಸಭೆಗಳಿಗೆ ಜೆಡಿಎಸ್ ಸದಸ್ಯರು ಬಂದರೂ ಸಭೆಯಿಂದ ಹೊರಗುಳಿದು ಸಭೆ ನಡೆಯದಂತೆ ಮಾಡಿ ಪರೋಕ್ಷವಾಗಿ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ತಂತ್ರ ಮುಂದುವರಿಸಿದ್ದಾರೆ. ಅಧ್ಯಕ್ಷೆ ಹಾಗೂ ಜೆಡಿಎಸ್ ಸದಸ್ಯರ ಪ್ರತಿಷ್ಠೆಯಿಂದಾಗಿ ಜಿಲ್ಲಾ ಪಂಚಾಯತಿಗೆ ಬಂದಿರುವ ಅನುದಾನ ಬಳಕೆಗೆ ತೊಡಕುಂಟಾಗಿದೆ. ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕುಸಭೆ ರದ್ದಾಗಿರುವುದರಿಂದ ಅನುದಾನ ಸರಕಾರಕ್ಕೆ ವಾಪಸ್ ಹೋಗುವ ಭೀತಿ ಎದುರಾಗಿದೆ.

ಸದಸ್ಯತ್ವ ಉಳಿವಿಗೆ ಜೆಡಿಎಸ್ ತಂತ್ರ!

ಪಂಚಾಯತ್ ರಾಜ್ ಅಧಿನಿಯಮದನ್ವಯ ಸತತ ಮೂರು ಸಭೆಗೆ ಗೈರಾದರೆ ಸದಸ್ಯತ್ವ ರದ್ದಾಗುವ ಭಯವಿದೆ. ಹೀಗಾಗಿ ಕೋರಂ ಅಭಾವ ಸೃಷ್ಟಿ ಮಾಡುವುದರ ಜೊತೆಗೆ ಸಭೆ ನಡೆಯದಂತೆ ನೋಡಿಕೊಳ್ಳುವ ತಂತ್ರವನ್ನು ಜೆಡಿಎಸ್ ಸದಸ್ಯರು ರೂಪಿಸಿದ್ದಾರೆ.
ಆ ತಂತ್ರವೆಂದರೆ, ಒಂದೊಂದು ಸಭೆಗೆ ಕೆಲವು ಸದಸ್ಯರು ಮಾತ್ರ ಹಾಜರಾಗಿ ಉಳಿದವರು ಗೈರಾಗುವುದು. ಮತ್ತೊಂದು ಸಭೆಗೆ ಹಿಂದಿನ ಸಭೆಗೆ ಗೈರಾಗಿದ್ದವರು ಹಾಜರಾಗಿ, ಹಾಜರಾಗಿದ್ದವರು ಗೈರಾಗುವುದು. ಹೀಗೆ ಸಭೆಗೆ ಬಂದಂತೆಯೂ ಆಗಬೇಕು. ಕೋರಂ ಅಭಾವ ಸೃಷ್ಟಿಸಿಯಾಗಿ ಸಭೆಯೂ ನಡೆಯಬಾರದು ಎನ್ನುವುದು ತಂತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com