ವಿಮಾನ ನಿಲ್ದಾಣ ಬಳಿ ತಲೆಯೆತ್ತಲಿದೆ ಕೆಂಪೇಗೌಡರ ಕಂಚಿನ ಪ್ರತಿಮೆ, ಏನಿದರ ವಿಶೇಷ, ಹೇಗಿರಲಿದೆ?

ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಈಗ ಭಾರೀ ಸುದ್ದಿಯಲ್ಲಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು ನಿನ್ನೆ ಕೆಂಪೇಗೌಡರ 511ನೇ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಪ್ರತಿಮೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಕೆಂಪೇಗೌಡ ಪ್ರತಿಮೆಯ ಸಾಂದರ್ಭಿಕ ಚಿತ್ರ
ಕೆಂಪೇಗೌಡ ಪ್ರತಿಮೆಯ ಸಾಂದರ್ಭಿಕ ಚಿತ್ರ

ಬೆಂಗಳೂರು:ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಈಗ ಭಾರೀ ಸುದ್ದಿಯಲ್ಲಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು ನಿನ್ನೆ ಕೆಂಪೇಗೌಡರ 511ನೇ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಪ್ರತಿಮೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಹಾಗಾದರೆ ಏನಿದರ ವಿಶೇಷತೆ, ಹೇಗೆ ನಿರ್ಮಾಣಗೊಳ್ಳಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ:
ಗುಜರಾತ್ ನಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತೆ ಪ್ರತಿಮೆ ನಿರ್ಮಿಸಿದ ಶಿಲ್ಪಿಗಳೇ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಕಟ್ಟಲಿದ್ದಾರೆ. 108 ಅಡಿ ಎತ್ತರದ ಪ್ರತಿಮೆಯಿದು.

ಏಕತೆ ಪ್ರತಿಮೆಯನ್ನು ನಿರ್ಮಿಸಿದವರು ಉತ್ತರ ಪ್ರದೇಶದ ತಂದೆ-ಮಗ ರಾಮ್ ವಿ ಸುತಾರ್ ಮತ್ತು ಅನಿಲ್ ಆರ್ ಸುತಾರ್. ಇವರು 2004ರಲ್ಲಿ 27 ಅಡಿ ಎತ್ತರದ ಮಹಾತ್ಮಾ ಗಾಂಧಿ ಕಂಚಿನ ಪ್ರತಿಮೆಯನ್ನು ವಿಧಾನ ಸೌಧ ಮುಂದೆ ನಿರ್ಮಿಸಿಕೊಟ್ಟಿದ್ದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಕೂಡ ಆಗಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥನಾರಾಯಣ್ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರ ಪ್ರತಿಮೆ ನಿರ್ಮಾಣಕ್ಕೆ ಕೆಲವು ನಿರ್ದಿಷ್ಟ ವಿಷಯಗಳನ್ನು ಸೂಚಿಸಿದ್ದು ಅದರ ಪ್ರಕಾರ ಕಂಚಿನಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ಕೆಂಪೇಗೌಡರು ನಿಂತ ಭಂಗಿಯಲ್ಲಿ ಕೈಯಲ್ಲಿ ಖಡ್ಗ ಹಿಡಿದುಕೊಂಡು ಕಟ್ಟಿಕೊಡಲಿದ್ದಾರೆ ಎಂದರು.

ಪ್ರತಿಮೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನಿಗದಿಪಡಿಸಲಾಗಿದೆ. ಪ್ರತಿಮೆಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಿ ಬಿಡಿ ಭಾಗಗಳಾಗಿ ಬೆಂಗಳೂರಿಗೆ ಸಾಗಾಟ ಮಾಡಿ ಇಲ್ಲಿ ಜೋಡಿಸಲಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ 23 ಎಕರೆ ಭೂಮಿಯಲ್ಲಿ ಸೆಂಟ್ರಲ್ ಥೀಮ್ ಪಾರ್ಕ್ ಮತ್ತು ಪ್ರತಿಮೆ ನಿರ್ಮಾಣ ಮೂಲಕ ಕೆಂಪೇಗೌಡರ ಜೀವನ ಮತ್ತು ಹೋರಾಟಗಳ ಬಗ್ಗೆ ಜನತೆಗೆ ತೋರಿಸಿಕೊಡಲಿದೆ ಎಂದು ಹೇಳಿದರು.

ಸುಮಾರು 78 ಕೋಟಿ ರೂಪಾಯಿ ಯೋಜನೆಯಿದು. ಇನ್ನು ಒಂದು-ಒಂದೂವರೆ ವರ್ಷಗಳಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com