ಹಿರಿಯ ಲೇಖಕಿ ಗೀತಾ ನಾಗಭೂಷಣ್ ಹೃದಯಾಘಾತದಿಂದ ನಿಧನ

ಹೃದಯಾಘಾತದಿಂದ ಹಿರಿಯ ಸಾಹಿತಿ, ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ (78) ನಿಧನರಾಗಿದ್ದಾರೆ. ಭಾನುವಾರ ಸಂಜೆ ಎದೆನೋವಿನಿಂದ ಬಳಲುತ್ತಿದ್ದ ಗೀತಾ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಗೀತಾ ನಾಗಭೂಷಣ್
ಗೀತಾ ನಾಗಭೂಷಣ್

ಕಲಬುರಗಿ: ಹೃದಯಾಘಾತದಿಂದ ಹಿರಿಯ ಸಾಹಿತಿ, ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ (78) ನಿಧನರಾಗಿದ್ದಾರೆ. ಭಾನುವಾರ ಸಂಜೆ ಎದೆನೋವಿನಿಂದ ಬಳಲುತ್ತಿದ್ದ ಗೀತಾ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಗದಗದಲ್ಲಿ ಆಯೋಜಿಸಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೀತಾ ನಾಗಭೂಷಣ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

1942ರ ಮಾರ್ಚ್ 25ರಂದು ಜನಿಸಿದ ಅವರು ಎಂ.ಎ. ಪದವಿ ಗಳಿಸಿದ ನಂತರ ನಗರದ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ಗೀತಾ ಅವರು 27 ಕಾದಂಬರಿಗಳು, 50 ಸಣ್ಣ ಕಥೆಗಳು, ಮತ್ತು 12 ನಾಟಕಗಳನ್ನು ಬರೆದಿದ್ದಾರೆ. 

‘ಬದುಕು’ ಮುಗಿಸಿದ ಸಾಹಿತಿ ಗೀತಾ ನಾಗಭೂಷಣ:
 
‘ತಾವರೆಯ ಹೂವು’ ಕಾದಂಬರಿಯಿಂದ ಮೊದಲ್ಗೊಂಡು ‘ಬದುಕು’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳ ಮೂಲಕ ಸಾಹಿತ್ಯಾಸಕ್ತರಿಗೆ ಚಿರಪರಿಚಿತರಾಗಿದ್ದ ಗೀತಾ ನಾಗಭೂಷಣ ತಮ್ಮ ಬದುಕಿನ ಪಯಣ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. 
ಇವರ ’ಹಸಿಮಾಂಸ ಮತ್ತು ಹದ್ದುಗಳು' ಕಾದಂಬರಿ ‘ಹೆಣ್ಣಿನ ಕೂಗು’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಹಲವಾರು. 

ಗೀತಾ ನಾಗಭೂಷಣ 1942 ಮಾರ್ಚ್ 25 ರಂದು ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಶಾಂತಪ್ಪ, ಶರಣಮ್ಮದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಕಿತ್ತು ತಿನ್ನುವ ಬಡತನ, ಅಸಹಕಾರಿ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದ ಛಲಗಾರ್ತಿ. 

ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು. ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಕೂಡಾ . ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಯೂ ಇವರದೆ. ಹೀಗೆ ಹ್ಯಾಟ್ರಿಕ್ ಮಹಿಳಾ ಸಾಹಿತಿ ಎಂದು ಇವರು ಖ್ಯಾತರಾಗಿದ್ದಾರೆ. ಕೋಲ್ಕತಾದ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ 2011-2012 ನೇ ಸಾಲಿನಲ್ಲಿ ಲಭಿಸಿದೆ. ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಮೊದಲ ಮಹಿಳಾ ಸಾಹಿತಿ ಕೂಡಾ ಡಾ. ಗೀತಾ ನಾಗಭೂಷಣ.

ಗದಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. “ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.” ಎಂದಿದ್ದರು.

ಪ್ರಶಸ್ತಿ ಗೌರವಗಳು: ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್,  ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮುಂತಾದ ಹಲವಾರು ಗೌರವಗಳ ಜೊತೆಗೆ,  2012ರ ವರ್ಷದಲ್ಲಿ ಡಾ. ಗೀತಾನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಅವರ ‘ಬದುಕು’ ಕಾದಂಬರಿಗೆ 2004 ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ. 

ಗಣ್ಯರ ಕಂಬನಿ:
ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಗೀತಾ ನಾಗಭೂಷಣ ಅವರು, ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯದ ಪ್ರಮುಖ ಮಹಿಳಾ ದನಿಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಹಿರಿಯ ಬರಹಗಾರ್ತಿ ಗೀತಾ ನಾಗಭೂಷಣ ಅವರ ನಿಧನ ತೀವ್ರ ‌ದುಃಖ ತಂದಿದೆ. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ, ಅತ್ತಿಮಬ್ಬೆ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು ಎಂದು ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಕನ್ನಡದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಗಾರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ನಾಡೋಜ ಗೌರವ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಸಂಖ್ಯಾತ ಅಭಿಮಾನಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಾಪ ಸೂಚಿಸಿ, ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಆಘಾತ ತಂದಿದೆ. ಕುಟುಂಬ ಹಾಗೂ ಹಿತೈಷಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಟ್ವಿಟ್ ಮಾಡಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ತಮ್ಮ ಪ್ರಗತಿಪರ ಕಾದಂಬರಿ ಮತ್ತು ಕಥೆಗಳ ಮೂಲಕ ಕನ್ನಡಿಗರ ಮನಸಲ್ಲಿ ಸ್ಥಾನ ಪಡೆದಿದ್ದ ಹಿರಿಯ ಕಾದಂಬರಿಗಾರ್ತಿ ಗೀತಾ ನಾಗಭೂಷಣರವರು ನಮನ್ನಗಲಿದ್ದಾರೆ. ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದು ಕೊಟ್ಟವರಾಗಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com