ಕೋಳಿ ಮಾಂಸ, ಮೊಟ್ಟೆ ಸುರಕ್ಷಿತ: ಕರೋನ ಭೀತಿ ಬೇಡ ಎಂದ ಸಚಿವರು

ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್(COVID2019) ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ/ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

ಬೆಂಗಳೂರು: ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್(COVID2019) ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ/ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ.
  
ನಮ್ಮ ದೇಶದಲ್ಲಿ ಕೋಳಿಗಳಿಗೆ ಕರೋನ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ ಹಾಗೂ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ. ಸೋಂಕು ಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಸ್ಪಷ್ಟ ಪಡಿಸಿದ್ದಾರೆ.
  
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಕುಕ್ಕಟ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಸಾಮಾನ್ಯವಾಗಿ ಕೋಳಿ ಮಾಂಸ ವನ್ನು ೧೦೦ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ. ಆದ್ದರಿಂದ, ಸಾರ್ವಜನಿಕರು ಕರೋನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿ ಕೊಡಬಾರದು.
  
ಈ ರೀತಿಯ ವಂದತಿಗಳನ್ನು ಹರಡುವುದರಿಂದ ಸಾರ್ವಜನಿಕರಿಗೆ ಉತ್ತಮ ಪೌಷ್ಟಿಕಾಂಶ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯಿಂದ ದೊರಕುವ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಬಾಣಂತಿ ಯರು ಪೋಷಕಾಂಶ ಕೊರತೆಯಿಂದ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ವದಂತಿಗಳು ಸಾಮಾಜಿಕ ಆಹಾರ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತವೆ.
  
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೋಳಿ ಮಾಂಸ ಮತ್ತು ಮೊಟ್ಟೆ ದೇಹಕ್ಕೆ ಉತ್ತಮ ಪ್ರೋಟೀನ್ ಪೂರೈಸುವ ಆಹಾರವಾಗಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಯಾರೂ ಇಂತಹ ವದಂತಿಗಳನ್ನು ಹರಡಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com