ಚಿಗಟೇರಿ ಜಿಲ್ಲಾ ಆಸ್ಪತ್ರೆ ಇನ್ನು ಮುಂದೆ ಕೋವಿಡ್ ಆಸ್ಪತ್ರೆ: ಸಚಿವ ಬಿ.ಎ.ಬಸವರಾಜ

ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದ್ದು ಕೋವಿಡ್ ಚಿಕಿತ್ಸೆಗಾಗಿ ಮಾತ್ರ ಸೀಮಿತಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ತಿಳಿಸಿದ್ದಾರೆ.
ಚಿಗಟೇರಿ ಜಿಲ್ಲಾಸ್ಪತ್ರೆ
ಚಿಗಟೇರಿ ಜಿಲ್ಲಾಸ್ಪತ್ರೆ

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದ್ದು ಕೋವಿಡ್ ಚಿಕಿತ್ಸೆಗಾಗಿ ಮಾತ್ರ ಸೀಮಿತಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ತಿಳಿಸಿದ್ದಾರೆ.

ಶನಿವಾರ ಜಿಲ್ಲಾಡಳಿತ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಬಿಟ್ಟು ಉಳಿದ ಕಾಯಿಲೆಗಳಿಗೆ ಬಾಪೂಜಿ, ಎಸ್‍ಎಸ್ ಆಸ್ಪತ್ರೆ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬೇರೆ ಕಾಯಿಲೆಗಳಿಗೆ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರಲು ಜಿಲ್ಲೆಯ ಜನರು ಭಯಬೀತರಾಗಿದ್ದರು. ಈ ನಿಟ್ಟಿನಿಲ್ಲಿ ಪ್ರತ್ಯೇಕವಾಗಿ ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದರು.

ಕಳೆದ ಬಾರಿ ಸಭೆ ಮಾಡಿ ನಿರ್ಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಗ್ರೀನ್ ಜೋನ್ ಇತ್ತು. ಕೆಲವೇ ದಿನಗಳಲ್ಲಿ ರೆಡ್ ಜೋನ್ ಆಗಿ ಮಾರ್ಪಟ್ಟಿದೆ. ಇದು ನನಗೂ ಕೂಡ ಅಘಾತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮನವಿ ಮಾಡುತ್ತಿದ್ದೇನೆ. ಕೊರೊನಾ ಎಂಬ ಮಾರಕ ರೋಗ ನಿಯಂತ್ರಣಕ್ಕೆ ಜಿಲ್ಲೆಯ ಜನತೆ ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿಗಳೂ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲ ಅಧಿಕಾರಿಗಳ ತಂಡ ಸೇರಿ ಒಗ್ಗಟ್ಟಾಗಿ ಸೇರಿಕೊಂಡು ಕೊರೋನಾ ಎದುರಿಸುವ ಕೆಲಸ ಮಾಡಬೇಕಾಗಿದೆ. ಪ್ರತಿನಿತ್ಯ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಅವರ ಜೊತೆ ಸಂಪರ್ಕದಲ್ಲಿ ಇದ್ದು, ಮಾಹಿತಿ ಪಡೆಯುತ್ತಿದ್ದೇನೆ. ಸಿಎಂ ಅವರು ಸಹ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೋವಿಡ್ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಲ್ಯಾಬ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದೆವು. ಅದರಂತೆ ಇನ್ನೆರಡು ದಿನದಲ್ಲಿ ಆರಂಭಿಸಲು ಸಚಿವರು ಅನುಮತಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಲ್ಯಾಬ್ ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಕ್ರಮ ಪಾಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಎಲ್ಲ ಚೆಕ್‍ಪೋಸ್ಟ್‌ಗಳಲ್ಲಿ ಹೆಚ್ಚು ತಪಾಸಣೆ ನಡೆಸಬೇಕು. ಜೊತೆಗೆ ನಗರದ ಒಳಗಡೆ ಬರುವ ಹಾಗೂ ಹೊರಗಡೆ ಹೋಗುವವರ ಬಗ್ಗೆ ನಿಗಾ ವಹಿಸಬೇಕು. ಕಂಟೈನ್‍ಮೆಂಟ್ ಜೋನ್ ಅಲ್ಲಿರುವವರ ಎಲ್ಲ ಜನರ ತಪಾಸಣೆ ಮಾಡಲು ಈಗಾಗಲೇ ನಿರ್ದೇಶನ ಹೊರಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಎಲ್ಲ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಹೋರಾಡಬೇಕಿದೆ. ಕೊರೋನಾ ಸೋಂಕಿನ ಮೂಲ ಪತ್ತೆ ಬಗ್ಗೆ ಎಸ್‍ಪಿ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಈರುಳ್ಳಿ ಮಾರುವ ವ್ಯಕ್ತಿಯಿಂದ ಸೋಂಕು ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಸದ್ಯದರಲ್ಲಿಯೇ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಮಾತನಾಡಿ, ಕೋವಿಡ್‍ಗಾಗಿ ಸಿಮೀತವಾಗಿವಾಗಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯವರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಾರದು. ಇದು ಸ್ಪಷ್ಟವಾದ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.

ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ಯಾವುದೇ ಆರೋಗ್ಯ ಸಿಬ್ಬಂದಿಗಳು, ವೈದ್ಯರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಅದೇ ಸಮಯದಲ್ಲಿ ಕೆಲಸ ಮಾಡುವಂತಿಲ್ಲ. ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ರೋಗದ ಲಕ್ಷಣ ಇರುವವರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com