ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ: ಶಿಕ್ಷಕ-ಪದವೀಧರ ಕ್ಷೇತ್ರದ ಶಾಸಕರ ಒಕ್ಕೊರಲ ಆಗ್ರಹ

ಕೊರೋನಾ ನಂತರದ ಸಾಮಾಜಿಕ ಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಬಾಕಿ ಉಳಿದಿರುವ ಪಿಯುಸಿ ಇಂಗ್ಲಿಷ್ ಪರೀಕ್ಷೆ, ಶಾಲಾ ಶೈಕ್ಷಣಿಕ ವರ್ಷ ಆರಂಭ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿ ಸಲಹೆ ಸೂಚನೆಗಳನ್ನು ಪಡೆದರು.
ವಿಧಾನ ಪರಿಷತ್ ಸದಸ್ಯರೊಂದಿಗೆ ವಿಡಿಯೊ ಸಂವಾದ
ವಿಧಾನ ಪರಿಷತ್ ಸದಸ್ಯರೊಂದಿಗೆ ವಿಡಿಯೊ ಸಂವಾದ

ಬೆಂಗಳೂರು: ಕೊರೋನಾ ನಂತರದ ಸಾಮಾಜಿಕ ಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಬಾಕಿ ಉಳಿದಿರುವ ಪಿಯುಸಿ ಇಂಗ್ಲಿಷ್ ಪರೀಕ್ಷೆ, ಶಾಲಾ ಶೈಕ್ಷಣಿಕ ವರ್ಷ ಆರಂಭ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿ ಸಲಹೆ ಸೂಚನೆಗಳನ್ನು ಪಡೆದರು.

ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಮುಂದಿನ ಶೈಕ್ಷಣಿಕ ವರ್ಷ ಸಮಯಕ್ಕೆ ಸರಿಯಾಗಿ ಆರಂಭವಾಗುವ ಸಾಧ್ಯತೆಗಳಿಲ್ಲವಾದ್ದರಿಂದ ಶೈಕ್ಷಣಿಕ ವರ್ಷಕ್ಕೆ ದಿನಗಳು ಕೊರತೆಯಾಗುವ ಹಿನ್ನೆಲೆಯಲ್ಲಿ ಪಠ್ಯಕ್ರಮ ಕಡಿತ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ ತರಗತಿಗಳನ್ನು ಆರಂಭಿಸುವುದು, ಬೋಧನೆ, ತರಗತಿ ಮಾಡುವುದು, ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆ, ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಕುರಿತು ವಿಧಾನಪರಿಷತ್ ಸದಸ್ಯರು ಸಲಹೆ ಸೂಚನೆ ನೀಡಿದರು.

ಸದಸ್ಯರ ಅಭಿಪ್ರಾಯಗಳೇನು?: ಬಹುತೇಕ ಎಲ್ಲ ಸದಸ್ಯರು, ನಮ್ಮ ರಾಜ್ಯದಲ್ಲಿ ಪ್ರತಿಯೊಂದಕ್ಕೂ ಪ್ರಮುಖ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಲೇಬೇಕು.

ಕೊರೋನಾ ಹಿನ್ನೆಲೆಯಲ್ಲಿ ಅದರೊಂದಿಗೆ ಹೋರಾಡುತ್ತಲೇ ನಾವು ನಮ್ಮ ಚಟುವಟಿಕೆಗಳನ್ನು ಮುಂದುವರೆಸಬೇಕಾದ ಅಗತ್ಯವಿರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಪರೀಕ್ಷೆ ನಡೆಸಬೇಕು, ಹಾಗೆಯೇ ಪಾಳಿ ಮೇಲೆ ತರಗತಿ ನಡೆಸಬೇಕೆಂದು ಸಲಹೆ ನೀಡಿದರು. ಕೆಲವರು ದಿನಬಿಟ್ಟು ದಿನ ಒಂದೊಂದು ತರಗತಿ ಶಾಲೆ ನಡೆಸಬೇಕು ಎಂದರೆ ಹಲವರು ಸಿಲೆಬಸ್ ಕಡಿಮೆ ಮಾಡುವುದು ತರವಲ್ಲ.

ಶಾಲಾ ಹಂತದಲ್ಲಿ ಇಲ್ಲವೇ ಕ್ಲಸ್ಟರ್ ಹಂತದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಶೀಘ್ರವಾಗಿ ಪ್ರಕ್ರಿಯೆ ಮುಗಿಸಲು ಸಾಧ್ಯವಾಗುತ್ತದೆ.

ಪಿಯುಸಿ ಹಂತದ ಸಿಲೆಬಸ್ ಕಡಿಮೆ ಮಾಡುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಮಾಡಬೇಕು. ನಮ್ಮ ರಾಜ್ಯವೊಂದರಲ್ಲೇ ಕಡಿತ ಮಾಡಿದರೆ ಅದು ಮುಂದೆ ನಮ್ಮ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಹುದಾದ ಸಾಧ್ಯತೆಗಳಿರುತ್ತವೆ. ಕೇಂದ್ರ ಪಠ್ಯದ ಶಾಲೆಗಳಲ್ಲಿ ಈ ಕುರಿತು ತೆಗೆದುಕೊಳ್ಳುವ ತೀರ್ಮಾನಗಳಿಗೆ ಅನುಗುಣವಾಗಿ ನಾವು ನಮ್ಮ ನಡೆಯನ್ನು ನಿರ್ಧರಿಸಬೇಕಾಗುತ್ತದೆ.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷಾ ಮತ್ತು ಮೌಲ್ಯಮಾಪನ ಕೇಂದ್ರಗಳನ್ನು ಹೆಚ್ಚಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಬೇಕು. ಶೀಘ್ರವೇ ಪಿಯುಸಿ ಮೌಲ್ಯಮಾಪನ ಶುರು ಮಾಡಬೇಕು. ಇಂಗ್ಲಿಷ್ ಪರೀಕ್ಷೆಯೊಳಗೆ ಪಿಯುಸಿ ಎಲ್ಲ ಪತ್ರಿಕೆಗಳ ಮೌಲ್ಯಮಾಪನ ಮುಗಿಯುವಂತಹ ವ್ಯವಸ್ಥೆಯಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಶೀಘ್ರ ಪರೀಕ್ಷಾ ಪ್ರಕ್ರಿಯೆ ಮುಗಿಸಲು ಅನುವಾಗುವಂತೆ ಮೌಲ್ಯಮಾಪನದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಮಾಡಬೇಕಿದೆ.

ಸಿಲೆಬಸ್ ಕಡಿಮೆ ಮಾಡುವುದು ಸರಿಯಲ್ಲ, ಶನಿವಾರ ಪೂರ್ಣ ಶಾಲೆ ನಡೆಸಬೇಕು, ದಸರಾ, ಬೇಸಿಗೆ ರಜೆ ರದ್ದು ಮಾಡಿ ಶಾಲಾ ಶೈಕ್ಷಣಿಕ ವರ್ಷ ಸರಿದೂಗಿಸಬೇಕೆಂದರೆ, ಕೆಲವರು ಕಡಿತವಾಗುವ ಶೈಕ್ಷಣಿಕ ವರ್ಷದ ಅವಧಿಗನುಗುಣವಾಗಿ ಮುಖ್ಯವಲ್ಲದ ಪಠ್ಯಗಳನ್ನು ಕೈಬಿಡುವುದು ಒಳ್ಳೆಯದೆಂದು ಸಲಹೆ ನೀಡಿದರು. ಸಚಿವರು ಈ ಕುರಿತಂತೆ ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲು ಕೈಗೊಂಡ ಕ್ರಮದ ಕುರಿತು ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿ ಸಚಿವರ ನಡೆಯನ್ನು ಪ್ರಶಂಶಿಸಿದರು.

ಈ ಬಗ್ಗೆ ಇನ್ನೊಮ್ಮೆ ತಮ್ಮೊಂದಿಗೆ ಚರ್ಚಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಹಿತವಾವಂತಹ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿ, ತಮ್ಮೊಂದಿಗೆ ಒತ್ತಾಸೆಯಾಗಿ ನಿಂತ ಎಲ್ಲ ಸದಸ್ಯರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com