ನಾಡೋಜ ಚೆನ್ನವೀರ ಕಣವಿ ಪತ್ನಿ, ಹಿರಿಯ ಲೇಖಕಿ ಶಾಂತಾದೇವಿ ಕಣವಿ ವಿಧಿವಶ

ಪ್ರಸಿದ್ಧ ಕವಿ ಚೆನ್ನವೀರ ಕಣವಿಯವರ ಪತ್ನಿ, ಹಿರಿಯ ಲೇಖಕಿ ಶಾಂತಾದೇವಿ ಕಣವಿ (88)  ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ. 
ಶಾಂತಾದೇವಿ ಕಣವಿ
ಶಾಂತಾದೇವಿ ಕಣವಿ

ಬೆಳಗಾವಿ: ಪ್ರಸಿದ್ಧ ಕವಿ ಚೆನ್ನವೀರ ಕಣವಿಯವರ ಪತ್ನಿ, ಹಿರಿಯ ಲೇಖಕಿ ಶಾಂತಾದೇವಿ ಕಣವಿ (88)  ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ. 

ಕಥೆಗಾರ್ತಿ, ಲೇಖಕಿಯಾಗಿ ಹೆಸರಾಗಿದ್ದ ಶಾಂತಾದೇವಿಯವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಮೃತರು ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗಿಡ್ಡನರವರ್ ಮನೆತನದವರಾಗಿದ್ದಶಾಂತಾದೇವಿಯವರು ಚೆನ್ನವೀರ ಕಣವಿಯವರನ್ನು ವಿವಾಹವಾಗಿ ಅವರ ಸಾಹಿತ್ಯ ಸೃಷ್ಟಿಗೆ ಸ್ಪೂರ್ತಿಯಾಗಿದ್ದರು.

ಮೃತರ ಅಂತ್ಯಕ್ರಿಯೆ ಶನಿವಾರ ಧಾರವಾಡದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.

ಶಾಂತಾದೇವಿ ಕಣವಿ ಕಿರು ಪರಿಚಯ

1933ರಲ್ಲಿ ವಿಜಯಪುರದಲ್ಲಿ ಜನಿಸಿದ್ದ ಶಾಂತಾದೇವಿ ಕಣವಿ ತಂದೆ ಸಿದ್ದಪ್ಪ, ತಾಯಿ ಭಾಗೀರಥಿದೇವಿ. ಕಂದಾಯ ಇಲಾಖೆಯಲ್ಲಿ ಮಾಮಲೆದಾರರಾಗಿದ್ದ ತಂದೆಯವರು ಮುಂಬೈ ಕರ್ನಾಟಕದ ಅಸಿಸ್ಟೆಂಟ್ ಕಮೀಷನರಾಗಿ ನಿವೃತ್ತರಾಗಿದ್ದರು. 

ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಓದಿ ಬರವಣಿಗೆಯ ಪರಿಚಯ ಮಾಡಿಕೊಂಡಿದ್ದ ಶಾಂತಾದೇವಿ  ಮೆಟ್ರಿಕ್ಯುಲೇಷನ್ ಮುಗಿಸಿದಾಗ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯವಾಗಿತ್ತು. ಇದಾಗಿ ಎರಡು ವರ್ಷಗಳ ನಂತರ ಮದುವೆ ನೆರವೇರಿತ್ತು.

ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆಗೆ ಹೆಸರಾಗಿದ್ದ ಶಾಂತಾದೇವಿ ಕಣವಿಯವರ ಕಥೆಗಳು ಸಾಕಷ್ಟು ಜನಪ್ರಿಯವಾಗಿದೆ. 

ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ ಇವು ಶಾಂತಾದೇವಿಯವರ ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ ಎಂಬ ಮಕ್ಕಳ ಸಾಹಿತ್ಯ ಸಹ ಪ್ರಕಟಿಸಿದ್ದರು. 

ಬಯಲು-ಆಲಯ ಕಥಾಸಂಕಲನಕ್ಕೆ 1974ರ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತ್ತು.  1987ರಲ್ಲಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಸಹ ಶಾಂತಾದೇವಿ ಭಾಜನರಾಗಿದ್ದರು. ಇವರ ಅನೇಕ ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರವಾಗಿದೆ.  ಶಾಂತಾದೇವಿಯವರ ಪುತ್ರಿ ಡಾ.ರಂಜನಾ ಗೋದಿ ಅವರೂ ಕವಿಯಿತ್ರಿಯಾಗಿದ್ದು ಬೆಳಗಾವಿಯ ಪ್ರಸಿದ್ಧ ವೈದ್ಯರಾಗಿದ್ದ ಡಾ.ಗೋದಿಯವರ ಪತ್ನಿಯಾಗಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com