ಶೀಘ್ರ ಜನೌಷಧಿ ಮಳಿಗೆಯಲ್ಲಿ ಆಯುರ್ವೇದಿಕ್ ಔಷಧ: ಕೇಂದ್ರ ಸಚಿವ ಸದಾನಂದಗೌಡ

ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ

ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10ರಿಂದ ಶೇ.90ರವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದರು.

ಜನರಿಕ್ ಮೆಡಿಸಿನ್ ಆ್ಯಪ್ ನಮ್ಮಲ್ಲಿದ್ದು, ನಿಮ್ಮ ಸಮೀಪದಲ್ಲಿ ಎಲ್ಲಿ ಜನರಿಕ್ ಔಷಧ ಮಳಿಗೆ ಇದೆ ಎಂದು ತಿಳಿಸುತ್ತದೆ. ಜೊತೆಗೆ ನಿಮಗೆ ಬೇಕಿರುವ ಔಷಧದ ಹೆಸರನ್ನು ಹಾಕಿದರೆ, ಆ ಔಷಧದ ಫಾರ್ಮೂಲಾ ಹೊಂದಿರುವ ಇತರೆ ಬ್ರಾಂಡ್ ನ ಯಾವ ಔಷಧ ಮಳಿಗೆಯಲ್ಲಿದೆ ಎಂಬುದನ್ನು ಆ್ಯಪ್ ತೋರಿಸುತ್ತದೆ. ಹೀಗಾಗಿ ರಾಜ್ಯದ ವಿವಿಧೆಡೆ ಶೀಘ್ರದಲ್ಲಿ 1000 ಜನರಿಕ್ ಔಷಧ ಮಳಿಗೆಗಳನ್ನು ತೆರೆಯುವ ಗುರಿಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಸಾಮಾನ್ಯ ಕಾಯಿಲೆಯಾದ ಬಿಪಿ, ಶುಗರ್ ಇದ್ದರೆ ಬ್ರಾಂಡೆಡ್ ಔಷಧಕ್ಕೆ ಸುಮಾರು 2 ಸಾವಿರದಿಂದ ಎರಡೂವರೆ ಸಾವಿರ ರೂಪಾಯಿ ಕೊಡಬೇಕು. ಆದರೆ, ಜನೌಷಧ ಮೂಲಕ ಕೇವಲ 400 ರೂಪಾಯಿಯಿಂದ 500 ರೂಪಾಯಿಗಳಷ್ಟು ಖರ್ಚಾಗುತ್ತಿದೆ ಎಂದು ತಿಳಿಸಿದರು.

ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಆಸ್ಪತ್ರೆಗಳಲ್ಲಿ ಜನೌಷಧಿಗಳನ್ನೇ ಬರೆಯುವ ಬಗ್ಗೆ ಸೂಚನೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರ ಜೊತೆಗೂ ಚರ್ಚಿಸಲಾಗಿದೆ. ಒಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಚಾಲನೆ ಸಿಕ್ಕರೆ ನಿಧಾನವಾಗಿ ಜನರಲ್ಲಿ ಪ್ರಚಾರ ಉಂಟಾಗುತ್ತದೆ ಎಂದು ಸಚಿವರಾದ ಸದಾನಂದ ಗೌಡ ಅವರು ತಿಳಿಸಿದರು.

ಜನೌಷಧ ಬಗ್ಗೆ ಪ್ರಶಂಸೆಯ ಪತ್ರ:
ತಂದೆಯ ಔಷಧಕ್ಕಾಗಿ ಪ್ರತಿ ತಿಂಗಳಿಗೆ 3 ಸಾವಿರ ಖರ್ಚಾಗುತ್ತಿತ್ತು. ಆದರೆ, ಜನೌಷಧ ಮಳಿಗೆಯಲ್ಲಿ ಕೇವಲ 210 ರೂಪಾಯಿಗಳು ಖರ್ಚಾಗುತ್ತಿದೆ ಎಂದು ನಾಗರಿಕರೊಬ್ಬರು ಬರೆದ ಪತ್ರವನ್ನು ಸಚಿವ ಸದಾನಂದ ಗೌಡ ಅವರು ಓದಿ ಹೇಳಿದರು. 

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಹಕಾರ ಇಲಾಖೆಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಸಹಕಾರ ಇಲಾಖೆ ಮೂಲಕ ನಾವು ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಜನೌಷಧ ಸೇರಿದಂತೆ ಹಲವು ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವಂತಹ ಕಾರ್ಯಕ್ರಮಕ್ಕೆ ಸಹಕಾರವನ್ನು ನಮ್ಮ ಸಹಕಾರ ಇಲಾಖೆ ಮಾಡುತ್ತಿದೆ. ಸಹಕಾರ ಇಲಾಖೆ ನಾಡಿನ ಮೂಲೆಮೂಲೆಗಳಲ್ಲಿ ಜನಸಂಪರ್ಕವನ್ನು ಹೊಂದಿರುವುದೇ ಇದಕ್ಕೆ ಕಾರಣ. ಸಹಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಶ್ರಮವಹಿಸಬೇಕು ಎಂದು ಕರೆ ನೀಡಿದರು.

ಸಹಕಾರ ಇಲಾಖೆಯ ಚುನಾವಣೆ ಶೀಘ್ರ ಬರುತ್ತಿದೆ. ಕೆಲವು ಕಡೆ ಜನರಲ್ ಬಾಡಿ ನಡೆದಿಲ್ಲ. ಅಂತಹ ಕಡೆಗಳಲ್ಲಿ ಜನರಲ್ ಬಾಡಿಗೆ ಈ ಯೋಜನೆಯ ಬಗ್ಗೆ ಅಜೆಂಡಾದಲ್ಲಿ ಸೇರಿಸಿಕೊಳ್ಳಬಹುದು. ಈ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com