ಬಳ್ಳಾರಿ ಜಿಲ್ಲೆ ವಿಭಜನೆ, ವದಂತಿಗಳಿಗೆ ಕಿವಿಗೊಡಬೇಡಿ: ಆನಂದ್ ಸಿಂಗ್

ಆಡಳಿತಾತ್ಮಕವಾಗಿ ಬಳ್ಳಾರಿ ಜಿಲ್ಲೆ ವಿಭಜನೆಗೊಂಡಿದ್ದು, ಈ ವಿಚಾರದಲ್ಲಿ ಜನ ಸಾಮಾನ್ಯರು ವದಂತಿಗಳಿಗೆ ಕಿವಿಗೊಡಬಾರದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
ಆನಂದ್ ಸಿಂಗ್
ಆನಂದ್ ಸಿಂಗ್

ಹೊಸಪೇಟೆ: ಆಡಳಿತಾತ್ಮಕವಾಗಿ ಬಳ್ಳಾರಿ ಜಿಲ್ಲೆ ವಿಭಜನೆಗೊಂಡಿದ್ದು, ಈ ವಿಚಾರದಲ್ಲಿ ಜನ ಸಾಮಾನ್ಯರು ವದಂತಿಗಳಿಗೆ ಕಿವಿಗೊಡಬಾರದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ‌ ಒಪ್ಪಿಗೆ ಪಡೆದ ನಂತರ ಸ್ವಕ್ಷೇತ್ರಕ್ಕೆ ಆಗಮಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನತೆ ಅಣ್ಣತಮ್ಮಂದಿರಂತೆ ಇದ್ದೇವೆ. ಮುಂದೆಯೂ ಒಟ್ಟಿಗೆ ಇರುತ್ತೇವೆ. ಇಂತಹ ಸಂದರ್ಭದಲ್ಲಿ ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದರು.

ಸಚಿವ ಸಂಪುಟದ ತೀರ್ಮಾನದಿಂದ ಕ್ಷೇತ್ರದಲ್ಲಿ ಸಂತಸದ ಹೊನಲು ಹರಿದಿದೆ. ವಿಜಯನಗರ ಜಿಲ್ಲೆಯ ಕೂಗು ಕೇವಲ ನನ್ನ ಕನಸು ಅಥವಾ ಹಠವಲ್ಲ, ಬಳ್ಳಾರಿ ಜಿಲ್ಲೆಯ ಎಲ್ಲಾ ಪಶ್ಚಿಮ ತಾಲೂಕುಗಳ ಬೇಡಿಕೆಯಾಗಿತ್ತು. ಮುಖ್ಯಮಂತ್ರಿಗಳು ಜನರ ಕೂಗಿಗೆ ಸ್ಪಂದಿಸಿ ಆಡಳಿತ್ಮಾಕವಾಗಿ ಜಿಲ್ಲೆ ವಿಭಜಿಸಿ ನೂತನ ಜಿಲ್ಲೆಗೆ ಸಕಾರಾತ್ಮಕವಾಗಿ ಅನುಮೋದನೆ ನೀಡಿದ್ದಾರೆ. ಇದೊಂದು ಚಾರಿತ್ರಿಕೆ ಬೆಳವಣಿಗೆ ಎಂದು ಹೇಳಿದರು.

ಆಡಳಿತ ಸುಗಮಗೊಳಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲೆ ರಚನೆ ಅಗತ್ಯವಾಗಿತ್ತು. ಜಿಲ್ಲೆ ರಚನೆ ಕುರಿತಂತೆ ಸಚಿವರು ಅನುಮೊದನೆ ನೀಡಿರುವುದು ಸಂತಸ ತಂದಿದೆ. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೂತನ ಜಿಲ್ಲೆಯ ಕುರಿತು ಹರಿದಾಡುವ ಪ್ರಚೋದನೆಗಳಿಗೆ ಕಿವಿಕೊಡಬೇಡಿ ಎಂದು ಹೇಳಿದರು. 

ನೂತನ ಜಿಲ್ಲೆ ನಮ್ಮೆಲ್ಲರ ಕನಸು. ಇದು ಯಾರದೇ ಪ್ರತಿಷ್ಠೆಯಲ್ಲ. ಜಿಲ್ಲೆಯ ಅಭಿವೃದ್ಧಿಗೆ ಗಮನಹರಿಸುತ್ತೇನೆ. ಕೆಎಂಆರ್ ಸಿ ನಿಧಿಯಡಿ 16 ಸಾವಿರ ಕೋಟಿ ರೂ ಇದ್ದು, ಒಡಿಶಾದಲ್ಲಿ ನಡೆಸಿದಂತೆ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಬಹುದು ಎಂಬ ಸಲಹೆಯನ್ನು ಸಚಿವ ಸಂಪುಟಕ್ಕೆ ನೀಡಿದ್ದೇನೆ. ಜಿಲ್ಲಾ ಖನಿಜ ನಿಧಿ ಇರುವುದರಿಂದ ಆಡಳಿತಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com