ಶೀಘ್ರದಲ್ಲೇ ದತ್ತಾಂಶ ಸುರಕ್ಷತೆ ಕಾನೂನು, 6 ಲಕ್ಷ ಕಿ.ಮೀ ಆಪ್ಟಿಕ್ ಫೈಬರ್ ಜಾಲ: ರವಿಶಂಕರ್ ಪ್ರಸಾದ್

ಡಿಜಿಟಲ್ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿರುವ ಕೇಂದ್ರ ಸರ್ಕಾರವು 1000 ದಿನಗಳಲ್ಲಿ 6 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್

ಬೆಂಗಳೂರು: ಡಿಜಿಟಲ್ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿರುವ ಕೇಂದ್ರ ಸರ್ಕಾರವು 1000 ದಿನಗಳಲ್ಲಿ 6 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ದೇಶದ ಮಹತ್ವದ ತಾಂತ್ರಿಕ ಕಾರ್ಯಕ್ರಮವಾದ “ಬೆಂಗಳೂರು ತಂತ್ರ ಜ್ಞಾನ ಮೇಳ-2020’(23ನೇ ಆವೃತ್ತಿ)ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್ ಸಂದರ್ಭವು ಒಂದೆಡೆ ನಮಗೆ ಸಂಕಷ್ಟವನ್ನು ತಂದೊಡ್ಡಿತು. ಮತ್ತೊಂದೆಡೆ, ಇಲ್ಲಿನ ಡಿಜಿಟಲ್ ತಂತ್ರಜ್ಞಾನ ಪರ್ಯಾಯವಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಿತು. ಜಾಗತಿಕ ತಯಾರಿಕಾ ಕಂಪನಿಗಳು ಕೋವಿಡ್ ಸನ್ನಿವೇಶದಲ್ಲಿ ಭಾರತದೆಡೆಗೆ ಧಾವಿಸಿಬಂದಿವೆ. ಕೋವಿಡ್ ಅವಧಿಯಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ವಲಯವು ಶೇ. 7ರಷ್ಟು ಬೆಳವಣಿಗೆ ಕಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಕಂಪನಿಗಳು ಭಾರತದಲ್ಲಿ 11 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಆಪಲ್ ಕಂಪನಿಯು ತನ್ನ ಫೋನ್ ಹಾಗೂ ಬಿಡಿಭಾಗಗಳನ್ನು ತಯಾರಿಸುವ 11 ಘಟಕಗಳನ್ನು ಪ್ರಮುಖವಾಗಿ ಚೀನಾ ಹಾಗೂ ಇತರ ದೇಶಗಳಿಂದ ಭಾರತಕ್ಕೆ ವರ್ಗಾಯಿಸಿದ್ದು, ಅದರ ಲಾಭ ಕರ್ನಾಟಕಕ್ಕೂ ಆಗಿದೆ. ಗೂಗಲ್, ಫೇಸ್ ಬುಕ್ ನಂತಹ ಕಂಪನಿಗಳು ಕೂಡ ಇಲ್ಲಿ ಹೂಡಿಕೆ ಹೆಚ್ಚಿಸಿವೆ ಎಂದರು.

ಡಿಜಿಟಲ್ ಇಂಡಿಯಾ ’ಅಭಿಯಾನವು ನಿಜವಾಗಿಯೂ ಭಾರತದಲ್ಲಿ ಪರಿವರ್ತನೆ ತಂದಿದೆ. ಇದು ಎಲ್ಲರನ್ನೂ ಒಳಗೊಂಡು ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದಾಗಿ ಕಳೆದ 5 ವರ್ಷಗಳಲ್ಲಿ ಫಲಾನುಭವಿಗಳಿಗೆ 12 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಾಗಿದೆ. ಸುಮಾರು 1.75 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಭ್ರಷ್ಟಾಚಾರವನ್ನು ಇದು ತೊಡೆದುಹಾಕಿದೆ ಎಂದು ಅವರು ವಿವರಿಸಿದರು.

ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಯು ದತ್ತಾಂಶ ಆಧಾರಿತವಾಗಲಿದೆ. ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾದ ಬೆಂಗಳೂರು ದತ್ತಾಂಶ ಆರ್ಥಿಕತೆಯ ದೊಡ್ಡ ಕೇಂದ್ರವೂ ಆಗಿ ಹೊರಹೊಮ್ಮಬೇಕು. ಕೇಂದ್ರ ಸರ್ಕಾರವು ದತ್ತಾಂಶ ಸುರಕ್ಷತೆ ಕಾನೂನು ರೂಪಿಸಲಿದೆ. ಸದೃಢ ಕೃತಕ ಬುದ್ಧಿಮತ್ತೆ ಕಾರ್ಯನೀತಿ ಜಾರಿಗೊಳಿಸುವುದಕ್ಕೂ ಒತ್ತು ಕೊಡಲಾಗುವುದು. ಕೃತಕ ಬುದ್ಧಿಮತ್ತೆ ತಾಂತ್ರಿಕತೆಯು ಎಲ್ಲರನ್ನೂ ಒಳಗೊಂಡು ಬೆಳವಣಿಗೆಗೆ ಅನುವು ಮಾಡಿಕೊಡಬೇಕು. ಇದೇ ವೇಳೆ ಮನುಷ್ಯನ ಭಾವನೆಗಳು ಕೂಡ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ರೂಪುರೇಷೆ ಸಿದ್ಧಗೊಳಿಸಲಿದೆ ಎಂದು ಅವರು ಹೇಳಿದರು.

“ಆತ್ಮನಿರ್ಭರ ಭಾರತ’ ಎಂದರೆ ಪ್ರತ್ಯೇಕತೆಯಲ್ಲ. ಅದು ಎಲ್ಲವನ್ನೂ ಒಳಗೊಳ್ಳುವಂಥದ್ದೂ ಹಾಗೂ ಸಮುದಾಯದ ನಡುವೆಯೇ ಹೊರಹೊಮ್ಮುವಂಥದ್ದೂ ಆಗಿರುತ್ತದೆ. ಈಗ ಭಾರತವನ್ನು ಇಡೀ ಪ್ರಪಂಚವೇ ಎದುರು ನೋಡುತ್ತಿದೆ. “ಡಿಜಿಟಲ್ ಇಂಡಿಯಾಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ಕರ್ನಾಟಕವು ಮುಂಬರುವ ದಿನಗಳಲ್ಲಿ ಹೊಸ ತಾಂತ್ರಿಕ ಪರಿಹಾರಗಳನ್ನು ರೂಪಿಸುವಲ್ಲಿ ಕೂಡ ಮುಂಚೂಣಿಯಲ್ಲಿರಬೇಕು ಎಂದು ಆಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com