ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ಎಸ್. ಪರಮಶಿವಯ್ಯ ನೇಮಕ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಬಿ.ಎಸ್.ಪರಮಶಿವಯ್ಯ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಬಿ.ಎಸ್.ಪರಮಶಿವಯ್ಯ
ಬಿ.ಎಸ್.ಪರಮಶಿವಯ್ಯ

ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಬಿ.ಎಸ್.ಪರಮಶಿವಯ್ಯ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷರಾಗಿರುವ ಬೆಂಗಳೂರಿನ ವಿಜಯನಗರದ ನಿವಾಸಿ ಬಿ.ಎಸ್.ಪರಮಶಿವಯ್ಯ ನೇಮಕಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಂಕಿತ ಹಾಕಿದ್ದಾರೆ. 

ಬಿ.ಎಸ್.ಪರಮಶಿವಯ್ಯ ಹಲವಾರು ವರ್ಷಗಳಿಂದ ವೀರಶೈವ ಲಿಂಗಾಯತ ಅಭಿವೃದ್ಧಿಗಾಗಿ ಸಾಮಾಜಿಕ ಕಾರ್ಯ, ಜೊತೆಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ವಿಧಾನ ಪರಿಷತ್ ಸದಸ್ಯರ ನೇಮಕದ ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಕೊನೆ ಘಳಿಗೆಯಲ್ಲಿ ಪರಮಶಿವಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಕೈತಪ್ಪಿತ್ತು. ಈಗ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. 

ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಇದಕ್ಕು ಮುನ್ನ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರಿಗೆ ದೂರವಾಣಿ ಕರೆ ಮಾಡಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ವೀರಣ್ಣ ಚರಂತಿಮಠ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರು. ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಪರಮಶಿವಯ್ಯ ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈಗಾಗಲೇ ವೀರಣ್ಣ ಚರಂತಿಮಠ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದರು ಎಂಬ ಮಾಹಿತಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com