ಕಂದಾಯ ಗುಪ್ತಚರ ಅಧಿಕಾರಿಗಳ ಕಾರ್ಯಾಚರಣೆ: ಕೆಐಎನಲ್ಲಿ ನಾಲ್ವರ ಬಂಧನ, 1.3 ಕೋಟಿ ರೂ. ಮೌಲ್ಯದ ಚಿನ್ನ ವಶ
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರನ್ನು ಬಂಧಿಸಿ 1.3 ಕೋಟಿ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Published: 25th November 2020 07:00 PM | Last Updated: 25th November 2020 07:12 PM | A+A A-

ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರನ್ನು ಬಂಧಿಸಿ 1.3 ಕೋಟಿ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಚಿನ್ನದ ಕಳ್ಳಸಾಗಣೆ ಬಗ್ಗೆ ಸುಳಿವು ಸಿಕ್ಕ ಬೆನ್ನಲ್ಲೇ ಡಿಆರ್‌ಐ ಅಧಿಕಾರಿಗಳು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಟಿವಿ ಸ್ಪೀಕರ್ ಪೆಟ್ಟಿಗೆಯಲ್ಲಿಟ್ಟು ಅವರು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಬಂಧಿತರಲ್ಲಿ ತಮಿಳುನಾಡಿನ ಮೂವರು ಮತ್ತು ಪಶ್ಚಿಮ ಬಂಗಾಳದ ಓರ್ವನಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಬೈನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಾಲ್ವರ ಪೈಕಿ ಮೂವರು ಎಲ್ಇಡಿ ಟಿವಿ ಸೆಟ್ ಮತ್ತು ಇನ್ನೊಬ್ಬರು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಿಸುತ್ತಿದ್ದರು. ಅಧಿಕಾರಿಗಳಿಗೆ ಸಂದೇಹವಿದ್ದ ಹಿನ್ನೆಲೆ ಅವರನ್ನು ಪರಿಶೀಲಿಸಿದಾಗ ಟಿ ವಿ ಸೆಟ್ ಗಳಲ್ಲಿ ಚಿನ್ನದ ಬಿಸ್ಕತ್ತುಗಳು ಕಂಡುಬಂದಿವೆ.. ಬಂಧಿತರು ತಮಿಳುನಾಡಿನಲ್ಲೂ ಚಿನ್ನದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರಿಗೆ ಅಂತರರಾಷ್ಟ್ರೀಯ ಸಂಪರ್ಕವಿದೆ ಎಂದು ಶಂಕಿಸಲಾಗಿದೆ. ಲಾಕ್‌ಡೌನ್ ನಂತರ ಪತ್ತೆಯಾದ ದೊಡ್ಡ ಪ್ರಮಾಣದ ಚಿನ್ನ ಕಳ್ಳಸಾಗಣೆ ಪ್ರಕರಣ ಇದು ಎಂದು ಅಧಿಕಾರಿಗಳು ತಿಳಿಸಿದರು.