ಮಂಗಳೂರು ಗಲಭೆ: 21 ಆರೋಪಿಗಳಿಗೆ ಸುಪ್ರೀಂನಿಂದ ಜಾಮೀನು ಮಂಜೂರು
ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರೋಧಿಸಿ ನಡೆದ ಪ್ರತಿಭಟನೆ, ಗೋಲಿಬಾರ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
Published: 09th September 2020 11:44 PM | Last Updated: 09th September 2020 11:44 PM | A+A A-

ಮಂಗಳೂರು ಹಿಂಸಾಚಾರ(ಸಂಗ್ರಹ ಚಿತ್ರರ)
ನವದೆಹಲಿ: ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರೋಧಿಸಿ ನಡೆದ ಪ್ರತಿಭಟನೆ, ಗೋಲಿಬಾರ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕರ್ನಾಟಕ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಡಿಸೆಂಬರ್ 19 ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯನ್ನು ಬಂಧಿಸಿತ್ತು. ಈ ಎಲ್ಲಾ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜ್ಯ ಸರ್ಕಾರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಯೊಬ್ಬ ಆರೋಪಿಗೆ 25 ಸಾವಿರ ರೂ.ಗಳ ಜಾಮೀನು ನೀಡುವಂತೆ ಸೂಚಿಸಿದೆ. ಅಲ್ಲದೆ ಪ್ರತಿ ಪರ್ಯಾಯ ಸೋಮವಾರ ಹತ್ತಿರದ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಮತ್ತು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ / ಸಭೆಗಳಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದೆ.